ಕರೋನಾ ಬಂದಾಗ-ಲೂಟಿಗೆ ಕಿತ್ತಾಟ, ಆರ್ಥಿಕ ಬಿಕ್ಕಟ್ಟಿನಲ್ಲಿ- ಖಾತೆ ಕಿತ್ತಾಟ, ಬೆಲೆ ಏರಿಕೆಯ ಸಂದರ್ಭದಲ್ಲಿ- ಸಿಡಿ ಕಳ್ಳಾಟ,ಜನಹಿತಕ್ಕಿಂತ ಸ್ವಹಿತವೇ ಮುಖ್ಯ: ಕಾಂಗ್ರೆಸ್
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕ್ರೋನಾಲಜಿಯನ್ನು ಕಾಂಗ್ರೆಸ್ ವಿವರಿಸಿದೆ. ನೆರೆ ಬಂದಾಗ ಸಂಪುಟವಿಲ್ಲದೆ ಪರದಾಡಿದ ಸರ್ಕಾರ, ಕೊರೋನಾ ಬಂದಾಗ ಕೊರೋನಾ ಲೂಟಿಗೆ ಕಿತ್ತಾಟದಲ್ಲಿ ತೊಡಗಿತ್ತು. ಆರ್ಥಿಕ ಬಿಕ್ಕಟ್ಟಿನಲ್ಲಿ ಖಾತೆ ಕಿತ್ತಾಟದಲ್ಲಿ ಕಾಲ ಕಳೆದ ಸರ್ಕಾರ ಬೆಲೆ ಏರಿಕೆ ಸಂದರ್ಭದಲ್ಲಿ ಸಿಡಿ ಕಳ್ಳಾಟದಲ್ಲಿ ತೊಡಗಿದೆ ಎಂದು ಟೀಕಿಸಿದೆ.
ಕೊರೋನಾ ಎರಡನೇ ಅಲೆ ಹೆಚ್ಚಿದ ಸಂದರ್ಭದಲ್ಲಿ ದೂರು, ಪ್ರತಿದೂರಿನ ರಂಪಾಟ ನಡೆಸುತ್ತಿದೆ. ಇವರಿಗೆ ಜನಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ ಎಂದು ಟ್ವೀಟರ್ ನಲ್ಲಿ ಕಾಂಗ್ರೆಸ್ ಕಿಡಿಕಾರಿದೆ.
ಸಿಡಿ ಸರ್ಕಾರಕ್ಕೆ ಸಿಡಿ ಚಿಂತೆಯಾದರೆ, ಜನತೆಗೆ ಬದುಕು ಉಳಿಸಿಕೊಳ್ಳುವ ಚಿಂತೆಯಾಗಿದೆ. ಕಿತ್ತಾಟದಲ್ಲೇ ಮುಳುಗಿರುವ ಸರ್ಕಾರಕ್ಕೆ ರಾಜ್ಯದಲ್ಲಿನ ಸಮಸ್ಯೆ ಬಗೆಹರಿಸುವ ಇಚ್ಚಾಶಕ್ತಿ ಇಲ್ಲವಾಗಿದೆ. ಹಲವು ದಿನಗಳಿಂದ ಸಾರಿಗೆ ನೌಕರರ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದ್ದರೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕಣ್ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಟೀಕಿಸಲಾಗಿದೆ.
ಆರೋಪಿಯೊಬ್ಬನನ್ನು ತಲೆ ತಪ್ಪಿಸಿಕೊಳ್ಳಲು ಸಹಕರಿಸುವುದೂ ಕೂಡಾ ಕಾನೂನಿನ ಪ್ರಕಾರ ಅಪರಾಧ. ಸದ್ಯ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ತಲೆಮರೆಸಿಕೊಂಡು ಅಜ್ಞಾತವಾಸದಲ್ಲಿದ್ದಾರೆ. ಅವರಿಗೆ ಸರ್ಕಾರವೇ ಸಹಕರಿಸುತ್ತಿದೆ. ಕಾನೂನು ಉಲ್ಲಂಘಿಸಿದ ಸರ್ಕಾರಕ್ಕೇನು ಶಿಕ್ಷೆ ಎಂದು ಪ್ರಶ್ನಿಸಲಾಗಿದೆ.