ಮುಜರಾಯಿ ಇಲಾಖೆಯಲ್ಲಿ ಕೂಡ ಸಿಎಂ ಹಸ್ತಕ್ಷೇಪ ಮಾಡಿ 80 ಕೋಟಿ ರೂ ಬಿಡುಗಡೆ?

ಬೆಂಗಳೂರು: ತಮ್ಮ ಇಲಾಖೆಯ ಕೆಲಸಗಳಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದು ಆರೋಪಿಸಿದ ನಂತರ ಮುಜರಾಯಿ ಇಲಾಖೆಯಲ್ಲಿ ಕೂಡ ಯಡಿಯೂರಪ್ಪನವರು ಹಸ್ತಕ್ಷೇಪ ಮಾಡಿ ಸಚಿವರನ್ನು ಧಿಕ್ಕರಿಸಿ 80 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದಾರೆ ಎಂದು ಆರೋಪಿಸಿರುವುದು ಗೊತ್ತಾಗಿದೆ.

ಈಶ್ವರಪ್ಪನವರ ನಿಕಟವರ್ತಿಗಳು ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಈಶ್ವರಪ್ಪ ಅವರನ್ನು ಕೇಳಿದರೆ ಈ ಹೊತ್ತಿನಲ್ಲಿ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಪಕ್ಷದ ನಾಯಕರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮೇ 2ರ ಚುನಾವಣಾ ಫಲಿತಾಂಶ ನಂತರ ಸರಿಯಾದ ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ. ಮುಜರಾಯಿ ಇಲಾಖೆಯಲ್ಲಿ 2 ಕೋಟಿ ರೂಪಾಯಿ ಯೋಜನೆಗೆ ಮುಖ್ಯಮಂತ್ರಿಗಳು 80 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದರು ಎಂಬ ಬಗ್ಗೆ ಈಶ್ವರಪ್ಪನವರಿಗೆ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಜರಾಯಿ ಇಲಾಖೆಯಲ್ಲಿ ಕೂಡ ಮುಖ್ಯಮಂತ್ರಿಗಳು ಮಧ್ಯೆಪ್ರವೇಶಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಇಲಾಖೆ ಸಚಿವ ಕೆ ಶ್ರೀನಿವಾಸ ಪೂಜಾರಿ ಉತ್ತರಿಸಿ, ಮುಖ್ಯಮಂತ್ರಿಗಳೇ ಎಲ್ಲದಕ್ಕೂ ಅಂತಿಮ ಅಧಿಕಾರಿಯಾಗುತ್ತಾರೆ. ನಾನು ಅವರ ಜೊತೆ ಮಾತನಾಡಿ ವಿವಾದ ಬಗೆಹರಿಸುತ್ತೇನೆ. ನನಗೆ ವೈಯಕ್ತಿಕವಾಗಿ ಸಿಎಂ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕೆ ಎಸ್ ಈಶ್ವರಪ್ಪನವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕೆ ಕೆ ಗೆಸ್ಟ್ ಹೌಸ್ ನಲ್ಲಿ ಭೇಟಿಯಾಗಿ ಅವರಿಗೆ ಪರಿಸ್ಥಿತಿ ವಿವರಿಸಿದ್ದಾರೆ, ಇನ್ನು ಮುಜರಾಯಿ ಇಲಾಖೆಯ 80 ಕೋಟಿ ರೂಪಾಯಿ ಬಿಡುಗಡೆಗೆ ಸಂಬಂಧಪಟ್ಟಂತೆ ಸಹ ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ. 

Leave a Reply

Your email address will not be published. Required fields are marked *

error: Content is protected !!