ನನ್ನ ಗಮನಕ್ಕೆ ಬಾರದೆ ಸಿಎಂ ಹಣ ಬಿಡುಗಡೆ ಮಾಡಿದ್ದಾರೆ: ನಾನು ರೆಬೆಲ್ ಅಲ್ಲ, ಲಾಯಲ್: ಈಶ್ವರಪ್ಪ

ಮೈಸೂರು: ನನ್ನ ಗಮನಕ್ಕೆ ತಾರದೆ ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದಾರೆ, ಅದರ ಬಗ್ಗೆ ನನಗೆ ಅಸಮಾಧಾನ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪನವರು ತಮ್ಮ ಇಲಾಖೆಯ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಎರಡು ದಿನಗಳ ಹಿಂದೆ ರಾಜ್ಯಪಾಲರಿಗೆ ಮತ್ತು ಹೈಕಮಾಂಡ್ ಗೆ ಪತ್ರದಲ್ಲಿ ಆರೋಪಿಸಿ ಸುದ್ದಿಯಾಗಿದ್ದಾರೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ. ಸಿಎಂ ಯಡಿಯೂರಪ್ಪನವರ ಆಡಳಿತ ವೈಖರಿ ಹಲವು ಸಚಿವರು, ಶಾಸಕರಿಗೇ ಸಮಾಧಾನವಾಗುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತಿದೆ. 

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ಮುಖ್ಯಮಂತ್ರಿಗಳು ಇಲಾಖೆಯ ಕೆಲಸಗಳಿಗೆ ನಿಯಮಾನುಸಾರ ಅನುದಾನ ನೀಡಲಿ, ಆದರೆ ನನ್ನ ಗಮನಕ್ಕೆ ಬಾರದೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಒಂದಕ್ಕೇ 65 ಕೋಟಿ ಬಿಡುಗಡೆ ಮಾಡಿದ್ದಾರೆ. ಹೀಗೆ ವಿವಿಧ ಕಾಮಗಾರಿ, ಇಲಾಖೆಯ ಕೆಲಸಗಳಿಗೆಂದು ಒಟ್ಟು 1,291 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಹಣಕಾಸು ಸಚಿವಾಲಯದಿಂದ ಮಾಹಿತಿ ಸಿಕ್ಕಿದೆ. ನನ್ನ ಇಲಾಖೆಯಲ್ಲಿ ನಡೆಯುತ್ತಿರುವ ಕೆಲಸಗಳು ನನಗೆ ಗೊತ್ತಾಗಬೇಕು, ನಾನು ಪೋಸ್ಟ್ ಮ್ಯಾನ್ ಅಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹೇಳಿದೆ, ಅದಕ್ಕವರು ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಕೂಡ ಹೇಳಿದ್ದಾರೆ ಎಂದರು.

ನಾನು ರೆಬೆಲ್ ಅಲ್ಲ, ಲಾಯಲ್: ಸಿಎಂ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಪತ್ರ ಬರೆದಿದ್ದೇನೆಯೇ ಹೊರತು ಇದರಲ್ಲಿ ವೈಯಕ್ತಿಕ ಕಾರಣಗಳಿಲ್ಲ, ಸಿಎಂ ವಿರುದ್ಧ ರೆಬೆಲ್ ಆಗಲ್ಲ, ನಾನು ಲಾಯಲ್, ಬಿಜೆಪಿ ಪಕ್ಷ ನನಗೆ ತಾಯಿ ಇದ್ದ ಹಾಗೆ, ನಾನು ಸೇರಿದಂತೆ ನಾಲ್ವರು ಸಚಿವರು, ಶಾಸಕರು ನನಗೆ ಸಹಮತ ನೀಡಿದ್ದಾರೆ. ರಾಜಿನಾಮೆ ಕೇಳಿದ್ದಾರೆ, ಖಾತೆ ಬದಲಾವಣೆ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇವಾವುದಕ್ಕೂ ಬಗ್ಗುವುದಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!