ಮುದ್ರಾಡಿ: ಗೌರಮ್ಮ ಅವರ ಗುಡಿಸಲಿನ ದುಸ್ಥಿತಿ, ಅಧಿಕಾರಿಗಳ ಕಣ್ತೆರೆಸಿದ ವರದಿ!

ಗುಂಡಾಳ: ವಿಕಲಚೇತನನಾದ ಮಗ, ಸಣಕಲು ಜೀವದ ಸೊಸೆ, ವೃದ್ಧೆ ಗೌರಮ್ಮ, ಇಬ್ಬರು ಮೊಮ್ಮಕ್ಕಳು, ಸುತ್ತಲೂ ಅರಣ್ಯದಂತಿರುವ ಹಾಡಿಯ ಪಕ್ಕದಲ್ಲಿ ಅಡಿಕೆ ಸೋಗೆಯಲ್ಲಿ ನಿರ್ಮಿಸಿದ ತಾತ್ಕಾಲಿಕ ಗುಡಿಸಲು. ಕುಡಿಯಲು ನೀರಿಲ್ಲ. ಪಕ್ಕದ ಹೊಳೆಯಲ್ಲಿ ನಿಂತಿರುವ ನೀರಿನಲ್ಲಿ ಸ್ಥಾನ ಮಾಡಿ ಮನೆಮಂದಿಯ ಮೈಯೆಲ್ಲ ತುರಿಕೆಯ ಪೊಕ್ಕೆಗಳು……… ಹೀಗೆ ಈ ಬಡ ಕುಟುಂಬದ ತೀವೃ ಸಂಕಷ್ಟ ಕಂಡು ಹೆಬ್ರಿ ತಾಲ್ಲೂಕು ತಹಶೀಲ್ಧಾರ್‌ ಕೆ. ಪುರಂದರ್‌ ಮರುಗಿ ಕುಟುಂಬದ ಸಕಲ ಕಷ್ಟವನ್ನು ದೂರ ಮಾಡುವ ಭರವಸೆ ನೀಡಿದರು.

ಗೌರಮ್ಮ ಕುಟುಂಬಕ್ಕೆ ಆಧಾರ್‌ ಕಾರ್ಡು ವ್ಯವಸ್ಥೆ ಮಾಡಿಸುವ ಜೊತೆಗೆ ಮಗ ವಿಶ್ವನಾಥ್‌ ಗೆ ವಿಕಲಚೇತನರ ವೇತನ, ವೃದ್ಧೆ ಗೌರಮ್ಮ ಗೆ ಸಂಧ್ಯಾ ಸುರಕ್ಷಾ ವೇತನವನ್ನು ಅತೀ ಶೀಘ್ರವಾಗಿ ಮಂಜೂರು ಮಾಡಿಸುತ್ತೇನೆ. ಗ್ರಾಮ ಲೆಕ್ಕಾಧಿಕಾರಿ ಮೂಲಕ ಸ್ಥಳ ತನಿಖೆ ಮಾಡಿಸಿ ಈಗ ಇರುವ ಜಾಗಕ್ಕೆ ಕಾನೂನು ಚೌಕಟ್ಟಿನಲ್ಲಿ ಹಕ್ಕುಪತ್ರ ನೀಡುವುದು, ತಪ್ಪಿದಲ್ಲಿ ಪಂಚಾಯಿತಿ ಸಹಕಾರದಲ್ಲಿ ಮನೆ ನಿವೇಶನ ಕೊಡಿಸುತ್ತೇನೆಂದು ಧೈರ್ಯ ತುಂಬಿದರು. ಬಳಿಕ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿಯವರೊಂದಿಗೆ ಚರ್ಚಿಸಿ ವಸತಿ ಯೋಜನೆಯ ಮಂಜೂರಾತಿಗೂ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಮಳೆಗಾಲದ ರಕ್ಷಣೆಗಾಗಿ ವ್ಯವಸ್ಥೆ : ಮಳೆಗಾಲ ಸಮೀಪಿಸುತ್ತಿದ್ದು ರಕ್ಷಣೆಗಾಗಿ ಅತೀ ಶೀಘ್ರವಾಗಿ ಕಬ್ಬಿಣದ ತಗಡು ಶೀಟ್‌ ಒದಗಿಸುವ ಭರವಸೆಯನ್ನು ನೀಡಿದ ತಹಶೀಲ್ಧಾರ್‌ ಸಂಘಸಂಸ್ಥೆಗಳು ಮತ್ತು ದಾನಿಗಳು ಕೂಡ ಬಡಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.

ಹೆಬ್ರಿ ಮಾಧ್ಯಮ ಮಿತ್ರರ ಕಳಕಳಿಗೆ ತಹಶೀಲ್ಧಾರ್‌ ಶ್ಲಾಘನೆ : ಹೆಬ್ರಿಯ ಮಾಧ್ಯಮ ಮಿತ್ರರಾದ ನರೇಂದ್ರ ಎಸ್‌ ಮರಸಣಿಗೆ ಮತ್ತು ಸುಕುಮಾರ್‌ ಮುನಿಯಾಲ್‌ ಅವರಿಂದ ಈ ಮನೆಯ ಸಂಕಷ್ಟ ನನ್ನ ಅರಿವಿಗೆ ಬಂದಿದ್ದು ಇಂದೇ ಸ್ಥಳಕ್ಕೆ ಭೇಟಿ ಪೂರ್ಣ ಮಾಹಿತಿ ಪಡೆದಿದ್ದೇನೆ. ಬಡವರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಕರ್ತವ್ಯ. ಹಾಗಾಗಿ ಬಂದಿದ್ದೇನೆ. ಹೆಬ್ರಿಯ ಮಾಧ್ಯಮ ಮಿತ್ರರಿಬ್ಬರ ಕಾಳಜಿ ಅತ್ಯಂತ ಖುಷಿಯಾಗಿದೆ ಎಂದರು.

ಗೌರಮ್ಮ ಮೊಮ್ಮಕ್ಕಳ ತುರಿಕೆಯ ಪೊಕ್ಕೆಯನ್ನು ಗಮನಿಸಿದ ತಹಶೀಲ್ಧಾರ್‌ ನಾಳೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರನ್ನು ಕಳಿಸಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದರು.

ಗೌರಮ್ಮ ಮನೆಯ ದುಸ್ಥಿತಿ ಕಂಡು ಅಕ್ಕಿ ದಿನಬಳಕೆಯ ವಸ್ತುಗಳ ಜೊತೆಗೆ ಆರ್ಥಿಕ ಸಹಾಯವನ್ನು ತಹಶೀಲ್ಧಾರ್‌ ಪುರಂದರ್‌ ವೈಯಕ್ತಿಕವಾಗಿ ನೀಡಿದರು. ಯಾವತ್ತು ಎದೆಗುಂದ ನಿಮ್ಮ ಜೊತೆಗೆ ನಾವು ಇದ್ದೇವೆ. ಆರೋಗ್ಯ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಕುಟುಂಬಕ್ಕೆ ಅಭಯ ನೀಡಿದರು.

ಬೆಳಕು ನೀಡಿದ : ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ : ಗೌರಮ್ಮ ಮನೆಯ ದುಸ್ಥಿತಿ ತಿಳಿದ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಡಾ.ಭಾರ್ಗವಿ ಆರ್‌. ಐತಾಳ್‌ ಲಯನ್ಸ್‌ ಕ್ಲಬ್‌ ಮೂಲಕ ಕಳೆದ ವಾರ ಮನೆಗೆ ಸೋಲಾರ್‌ ದೀಪವನ್ನು ಕೊಡುಗೆಯಾಗಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!