ತಜ್ಞರ ಸಲಹೆ ಪಡೆಯದೇ ಭಾರತದಲ್ಲಿ ಲಾಕ್ ಡೌನ್ ಹೇರಿದ್ದ ಪ್ರಧಾನಿ ಮೋದಿ- ಬಿಬಿಸಿ ವರದಿ

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಆರಂಭಿಕ ಹಂತದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ತಜ್ಞರ ಸಲಹೆಯನ್ನೂ ಪಡೆಯದೇ ಲಾಕ್ ಡೌನ್ ಹೇರಿದ್ದರು ಎಂದು ಅಂತಾರಾಷ್ಯ್ರೀಯ ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ.

ಬಿಬಿಸಿಯ ಜುಗಾಲ್ ಪುರೋಹಿತ್ ಮತ್ತು ಅರ್ಜುನ್ ಪಾರ್ಮರ್ ಎಂಬ ಪತ್ರಕರ್ತರು ಈ ಬಗ್ಗೆ ವರದಿ ಮಾಡಿದ್ದು, ಬಿಬಿಸಿ ಈ ವರದಿಯನ್ನು ಪ್ರಕಟಿಸಿದೆ. ಮೂಲಗಳ ಪ್ರಕಾರ ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಬಿಬಿಸಿ ಒಟ್ಟು 240 ಆರ್ ಐಟಿ ಅರ್ಜಿಗಳನ್ನು ಹಾಕಿತ್ತು ಎನ್ನಲಾಗಿದೆ. ಈ ಅರ್ಜಿಗಳಿಗೆ ಬಂದ ಉತ್ತರಗಳ ಆಧಾರದ ಮೇಲೆ ಬಿಬಿಸಿ ಈ ವರಿದಿ ಮಾಡಿದೆ. ಈ ಎಲ್ಲ ವರದಿಗಳಿಗೆ ಬಂದ ಉತ್ತರಗಳನ್ನೂ ಕೂಡ ಬಿಬಿಸಿ ಪ್ರಕಟಿಸಿದ್ದು, ಲಾಕ್‌ ಡೌನ್‌ ಹೇರುವ ಮುಂಚೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ತಜ್ಞರು ಅಥವಾ ಪರಿಣಿತರ ಸಲಹೆ ಪಡೆದಿರಲಿಲ್ಲ ಎನ್ನಲಾಗಿದೆ.

ಅಂತೆಯೇ ಬಿಬಿಸಿ ತನ್ನ ವರದಿಯಲ್ಲಿ ‘ಭಾರತೀಯ ಗೃಹ ಇಲಾಖೆಯು ಈ ಸಂಬಂಧ ಹಲವು ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಿತ್ತು ಮತ್ತು ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿತ್ತು. ಲಾಕ್‌ಡೌನ್ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೃಹ ಸಚಿವಾಲಯ, ಮಾಹಿತಿ ನೀಡಲು ಪದೇ ಪದೇ ನಿರಾಕರಿಸುತ್ತಿತ್ತು. ನಾವು ಕೇಳಿದ ಉತ್ತರಗಳು “ದೇಶದ ಕಾರ್ಯತಂತ್ರದ ಮತ್ತು ಆರ್ಥಿಕ ಹಿತಾಸಕ್ತಿಗೆ ಸಂಬಂಧಿಸಿವೆ ಮತ್ತು ಇದು ವಿಶ್ವಾಸಾರ್ಹ ಸಂಬಂಧದ ಅಡಿಯಲ್ಲಿರುವ ಮಾಹಿತಿಯನ್ನು ಸಹ ಒಳಗೊಂಡಿದೆ. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) (ಎ) ಮತ್ತು (ಇ)2005ರ ಅಡಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮುಕ್ತವಾಗಿದೆ ಎಂದು ಹೇಳಿತ್ತು ಎಂದು ವರದಿ ಉಲ್ಲೇಖಿಸಿದೆ.

2020ರ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಲಾಕ್ ಡೌನ್ ಹೇರಿದ್ದರು. ಭಾರತ ದೇಶದಲ್ಲಿ ಕೊರೋನ ಕಾರಣದಿಂದ ಲಾಕ್‌ ಡೌನ್‌ ಹೇರಿದ್ದರಿಂದ ದೇಶಾದ್ಯಂತ ಹಲವಾರು ಮಂದಿ ಸಂಕಷ್ಟಕ್ಕೀಡಾಗಿದ್ದು ಮಾತ್ರವಲ್ಲದೇ ಹಲವರು ಹಲವು ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು. ಲಾಕ್‌ ಡೌನ್‌ ನಲ್ಲಿ ಹೆಚ್ಚಾಗಿ ಪೀಡಿತರಾಗಿದ್ದು, ಬಡವರು, ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಸ್ಥರಾಗಿದ್ದಾರೆ. ಆಕಸ್ಮಿಕವಾಗಿ ಅವರ ಕೆಲಸ ಕಾರ್ಯಗಳೆಲ್ಲಾ ನಿಂತು ಹೋಗಿತ್ತು. ಇದು ವಾಣಿಜ್ಯ ವಹಿವಾಟುಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಮಾತ್ರವಲ್ಲದೇ ವಲಸೆ ಕಾರ್ಮಿಕರು ಕೂಡಾ ಸಂಕಷ್ಟ ಅನುಭವಿಸಿದ್ದರು. ಗರ್ಭಿಣಿ ಮಹಿಳೆಯರು, ರೋಗಿಗಳು ಮತ್ತು ಅಪೌಷ್ಠಿಕತೆ ಹೊಂದಿರುವ ಮಕ್ಕಳು ಕೂಡಾ ಸಂಕಷ್ಟ ಅನುಭವಿಸಿದ್ದಾಗಿ ವರದಿ ತಿಳಿಸಿದೆ.

ಎಲ್ಲಾ ದೇಶಗಳಿಗಿಂತ ಬೇಗನೇ ಭಾರತ ಲಾಕ್‌ ಡೌನ್‌ ಹೇರಿತ್ತು. 519 ಪ್ರಕರಣಗಳು ಮತ್ತು 9 ಮಂದಿ ಮೃತಪಟ್ಟ ಸಂದರ್ಭದಲ್ಲಿ ಲಾಕ್‌ ಡೌನ್‌ ಹೇರಲಾಗಿತ್ತು. 68 ದಿನಗಳ ಈ ಲಾಕ್ ಡೌನ್ ಅನ್ನು ಆಕ್ಸ್ ಫರ್ಡ್‌ ವಿವಿಯು “ವಿಶ್ವದಲ್ಲೇ ಕಟ್ಟುನಿಟ್ಟಾದ ಲಾಕ್‌ ಡೌನ್”‌ ಎಂದು ಬಣ್ಣಿಸಿತ್ತು.

Leave a Reply

Your email address will not be published. Required fields are marked *

error: Content is protected !!