ಸುಶಾಂತ್ ಸಿಂಗ್ ಸಾವಿಗೆ ವೃತ್ತಿಪರ ವೈಷಮ್ಯ ಕಾರಣವೇ?: ತನಿಖೆ ನಡೆಸಲಿದೆ ಸರ್ಕಾರ

ಮುಂಬೈ: ಬಾಲಿವುಡ್ ನ ಯುವನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕೇಳಿಬರುತ್ತಿರುವ ಹಲವು ಆರೋಪಗಳು, ವದಂತಿಗಳಲ್ಲಿ ಅವರಿಗೆ ವೃತ್ತಿಪರ ದ್ವೇಷ ಮತ್ತು ಖಿನ್ನತೆ ಸಮಸ್ಯೆ ಅಪಾರವಾಗಿ ಕಾಡಿತ್ತು ಎಂಬ ವಿಷಯಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಕಳೆದ ಭಾನುವಾರ ಮುಂಬೈ ನಗರದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಶವ ಪತ್ತೆಯಾಗಿತ್ತು. ನಿನ್ನೆ ಅವರ ಅಂತ್ಯಕ್ರಿಯೆ ಮುಂಬೈಯಲ್ಲೇ ನೆರವೇರಿತ್ತು.

ಇನ್ನು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶ್ ಮುಖ್, ಶವದ ಮರಣೋತ್ತರ ಪರೀಕ್ಷೆಯಲ್ಲಿ ನಟ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಬಂದಿದೆ. ಆದರೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಪ್ರಕಾರ ವೃತ್ತಿಪರ ದ್ವೇಷಗಳಿಂದ ಅವರು ಮಾನಸಿಕವಾಗಿ ತೀವ್ರ ಖಿನ್ನತೆ ಅನುಭವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದಿದ್ದಾರೆ.

ನಟನ ನಿವಾಸದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು ಸಾವಿನ ಹಿಂದೆ ಯಾರ ಕೈವಾಡವೂ ಸದ್ಯಕ್ಕೆ ಕಂಡುಬರುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನಲ್ಲಿ ಪಕ್ಷಪಾತ ಬಹಳಷ್ಟಿದೆ, ಇಲ್ಲಿ ಅವಕಾಶ ಸಿಗಲು ಗಾಡ್ ಫಾದರ್ ಗಳ ಸಹಾಯ ಬೇಕಾಗುತ್ತದೆ. ಯಾವುದೂ ಇಲ್ಲದೆ ಸರಳ ಹಿನ್ನೆಲೆಯಿಂದ ಬಂದವರನ್ನು ಕೀಳಾಗಿ ಕಾಣಲಾಗುತ್ತಿದೆ ಎಂದು ಹಲವು ಸೆಲೆಬ್ರಿಟಿಗಳು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರಲ್ಲಿ ಬಾಲಿವುಡ್ ನಿರ್ಮಾಪಕ ಶೇಖರ್ ಕಪೂರ್, ನಟಿ ಕಂಗನಾ ರಾನಾವತ್ ಪ್ರಮುಖರು.

ಸುಶಾಂತ್ ಸಿಂಗ್ ರಜಪೂತ್ ಕುಟುಂಬಸ್ಥರು ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ, ಇದರ ಹಿಂದೆ ಪಿತೂರಿಯಿದೆ ಎಂದು ಸುಶಾಂತ್ ಸಂಬಂಧಿಕ ಬಿಹಾರದಲ್ಲಿ ಶಾಸಕರಾಗಿರುವ ನೀರಜ್ ಬಬ್ಲು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!