ಕಚ್ಚಾತೈಲ ಬೆಲೆ ಇಳಿಕೆ ಲಾಭ ಜನರಿಗೆ ಏಕೆ ನೀಡುತ್ತಿಲ್ಲ?: ಪ್ರಧಾನಿಗೆ ಸೋನಿಯಾ ಪತ್ರ

ನವದೆಹಲಿ: ಕಳೆದ ವಾರದಿಂದ ಸತತವಾಗಿ ಇಂಧನ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಗಮನ ಸೆಳೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೋವಿಡ್-19 ಸಮಸ್ಯೆಯ ಸಮಯದಲ್ಲಿ ಈ ರೀತಿ ಇಂಧನ ಬೆಲೆ ಏರಿಸುತ್ತಿರುವುದರ ಹಿಂದಿನ ತಾರ್ಕಿಕ ಅಂಶವೇನೆಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವಾಗ ಅದರ ಪ್ರಯೋಜನವನ್ನು ಜನರಿಗೆ ಒದಗಿಸಿಕೊಡುವ ಬದಲು ಸರ್ಕಾರ ತೈಲ ಬೆಲೆಯನ್ನು ಹೆಚ್ಚು ಮಾಡುತ್ತಿದೆ ಎಂದು ಸಹ ಆರೋಪಿಸಿದ್ದಾರೆ. ಕೋವಿಡ್-19ನಿಂದಾಗಿ ಇಡೀ ದೇಶಕ್ಕೆ ಸಮಸ್ಯೆಯಾಗಿದ್ದು ಕೋಟ್ಯಂತರ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಮಾಡುವುದರ ತಾರ್ಕಿಕ ನಿರ್ಧಾರವೇನೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.

ಅಸಮರ್ಪಕ ರೀತಿಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ 2,60 ಸಾವಿರ ಕೋಟಿ ರೂಪಾಯಿಗಳನ್ನು ಆದಾಯ ಗಳಿಸಲು ಪ್ರಯತ್ನಿಸುತ್ತಿದೆ.ಆದರೆ ಇಂಧನ ಬೆಲೆ ಹೆಚ್ಚಳ ಈ ಸಮಯದಲ್ಲಿ ದೇಶದ ಜನರಿಗೆ ಹೆಚ್ಚುವರಿ ಹೊರೆಯಾಗಿದ್ದು ಇದು ಸರಿಯಾದ ನಿರ್ಧಾರವಲ್ಲ ಜೊತೆಗೆ ನ್ಯಾಯಸಮ್ಮತವೂ ಅಲ್ಲ ಎಂದು ಆಪಾದಿಸಿದ್ದಾರೆ.

ಇಂಧನ ಬೆಲೆ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಂಡು ಕಚ್ಚಾ ತೈಲ ಬೆಲೆ ಇಳಿಕೆಯ ಪ್ರಯೋಜನವನ್ನು ಜನತೆಗೆ ನೀಡಿ. ದೇಶದ ಜನರು ಸ್ವಾವಲಂಬಿಗಳಾಗಬೇಕೆಂದರೆ ಅವರು ಮುಂದೆ ಹೋಗುವ ಸಾಮರ್ಥ್ಯಕ್ಕೆ ಆರ್ಥಿಕ ಹೊರೆ ಹೇರಿ ಹಿಂದೆ ಹಾಕಬೇಡಿ ಎಂದು ಸಹ ಸೋನಿಯಾ ಗಾಂಧಿ ಪ್ರಧಾನಿ ಮೋದಿಯನ್ನು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!