ಉಡುಪಿ: ಜಿಲ್ಲಾಸ್ಪತ್ರೆಯ ಸ್ವಚ್ಚತೆ ನಿರ್ಲಕ್ಷ್ಯ, ಗುತ್ತಿಗೆ ರದ್ದುಗೊಳಿಸುವಂತೆ ಸಚಿವ ಡಾ.ಕೆ ಸುಧಾಕರ್ ಆದೇಶ

ಉಡುಪಿ: ಇಂದು ಭೇಟಿ ನೀಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯ ಮಹಿಳಾ ವಾರ್ಡ್‍ಗೆ ಭೇಟಿ ನೀಡಿದ್ದು, ವಾರ್ಡ್‍ನಲ್ಲಿ ಬೆಡ್‍ಶೀಟ್‍ಗಳು ಶುಚಿಯಾಗಿಲ್ಲದಿರುವುದನ್ನು ಗಮನಿಸಿದ್ದಾರೆ.

ಇದೇ ವೇಳೆ ಆಸ್ಪತ್ರೆಯಲ್ಲಿ ಸ್ವಚ್ಚತೆಗೆ ಆದ್ಯತೆ ನಿಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಕುರಿತಾಗಿ ಇದರ ಗುತ್ತಿಗೆ ವಹಿಸಿರುವ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿ, ಗುತ್ತಿಗೆಯನ್ನು ರದ್ದುಗೊಳಿಸುವಂತೆ ಅವರು ಸೂಚನೆ ನೀಡಿದರು. ಈ ಬಗ್ಗೆ ಸಂಬಂಧ ಪಟ್ಟ ಹಿರಿಯ ಶುಶ್ರೂಷಕಿಯನ್ನು ಕರೆಸಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ತಿಳಿಸಿ, ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೇವೆಯನ್ನು ನಾವು ನೀಡಬೇಕು. ಅವರಿಗಿಂತ ಹೆಚ್ಚಿನ ಸಂಬಳ ನಾವು ನೀಡುತ್ತೇವೆ. ಆದರೆ ಸೇವೆ ಮಾತ್ರ ಅವರ ಅರ್ಧದಷ್ಟು ನಮ್ಮಲ್ಲಿ ಇರುವುದಿಲ್ಲ ಎಂದು ಸಚಿವರು ಹೇಳಿದರು.

ಸಚಿವರು ಆಸಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಹಿಳೆಯೊಬ್ಬರು ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ದೂರಿದ್ದು ಬೆಡ್‍ನಲ್ಲಿ ಮಲಗಿಕೊಂಡೇ ಇರುವ ವೃದ್ಧೆಯನ್ನು ಎಕ್ಸ್‍ರೇ ಸೇರಿದಂತೆ ಇತರ ಪರೀಕ್ಷೆಗೆ ಕರೆದುಕೊಂಡು ಹೋಗಲು ಸ್ಟಕ್ಚರ್ ಇಲ್ಲದೆ ಸಮಸ್ಯೆಯಾಗಿದೆ. ಗಾಲಿ ಕುರ್ಚಿಯಲ್ಲಿ ಅವರನ್ನು ಕರೆದುಕೊಂಡು ಹೋಗಲು ಆಗುವುದಿಲ್ಲ ಅಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳನ್ನು ಗಾಲಿ ಕುರ್ಚಿಯಿಂದ ಬೆಡ್‍ನಲ್ಲಿ ಮಲಗಿಸುವ ಕೆಲಸವನ್ನು ನರ್ಸ್‍ಗಳು ಮಾಡುತ್ತಿಲ್ಲ.

ನಾವು ಮಾಡಿದರೆ ನಮ್ಮನ್ನೇ ಹೊರಗೆ ಕಳುಹಿಸುತ್ತಾರೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದರು. ಈ ವೇಳೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಚಿವರು, ಸರ್ಜನ್ ಡಾ.ಮಧುಸೂದನ್ ನಾಯಕ್ ಅವರಿಗೆ ಸೂಚಿಸಿದರು.ಇನ್ನು ಆಸ್ಪತ್ರೆಯ ಔಷಧಾಲಯ, ತುರ್ತು ಚಿಕಿತ್ಸಾ ಘಟಕ ಮತ್ತು ಕೋವಿಡ್ ಲಸಿಕಾ ಕೇಂದ್ರಗಳನ್ನು ಪರಿಶೀಲಿಸಿದ ಸಚಿವರು, ಆಸ್ಪತ್ರೆಯಲ್ಲಿ ಜನ ಔಷಧಿ ಕೇಂದ್ರ ಸ್ಥಾಪಿಸುಂತೆ ಸರ್ಜನ್‍ಗೆ ಸೂಚನೆ ನೀಡಿದರು.ಬಳಿಕ ಕೋವಿಡ್ -19 ಲಸಿಕಾ ಕೇಂದ್ರಕ್ಕೆ ತೆರಳಿದ ಸಚಿವರು, ಲಸಿಕೆ ಹಾಕಲು ಬಂದವರಲ್ಲಿ ಲಸಿಕೆ ಕುರಿತು ವಿಚಾರಿಸಿದರು. ಬಳಿಕ ಸಚಿವರ ಸಮ್ಮುಖದಲ್ಲಿಯೇ ಆಸ್ಪತ್ರೆಯ ಸಿಬ್ಬಂದಿಗಳು, ಕೋವಿಡ್ ಲಸಿಕೆಯನ್ನು ನೀಡಿದರು.

ಇದಕ್ಕೂ ಮುನ್ನ ಸಚಿವರು, ನಗರದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಚಿವರು ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ಅಲ್ಲಿಂದ ಸಚಿವರು ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಾ.ಬಿ.ಆರ್. ಶೆಟ್ಟಿ, ಅಲ್ಲಿನ ವೈದ್ಯಕೀಯ ಅಧೀಕ್ಷಕಿ ಡಾ.ಶಿಕಾ ಗಾರ್ಗ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!