ಕೋವಿಡ್ -19: ಪರಿಸ್ಥಿತಿ ತೀರಾ ಹದಗೆಡುತ್ತಿದೆ, ಇಡೀ ದೇಶ ‘ಅಪಾಯದಲ್ಲಿದೆ’- ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿಕೊರೋನಾವೈರಸ್ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ವಿಶೇಷವಾಗಿ ಕೆಲ ರಾಜ್ಯಗಳಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ ಎಂದು ಮಂಗಳವಾರ ತಿಳಿಸಿರುವ ಕೇಂದ್ರ ಸರ್ಕಾರ, ಇಡೀ ದೇಶ ಅಪಾಯದಲ್ಲಿದೆ. ಯಾರೂ ಕೂಡಾ ನಿರ್ಲಕ್ಷ್ಯ ವಹಿಸಬಾರದು ಎಂದು ಒತ್ತಿ ಹೇಳಿದೆ.

ಕೊರೋನಾ-19 ನಿಂದ ಹೆಚ್ಚು ತೊಂದರೆಗೊಳಗಾಗಿರುವ ಅಗ್ರ 10 ಜಿಲ್ಲೆಗಳ ಪೈಕಿಯಲ್ಲಿ 8 ಮಹಾರಾಷ್ಟ್ರಕ್ಕೆ ಸೇರಿದ್ದರೆ ಒಂದು ದೆಹಲಿಗೆ ಸೇರಿರುವುದಾಗಿ ಸರ್ಕಾರ ತಿಳಿಸಿದೆ. 

ಆರೋಗ್ಯ ಕಾರ್ಯದರ್ಶಿ ರಾಜೀಶ್ ಭೂಷಣ್, ಸುದ್ದಿಗೋಷ್ಠಿಯಲ್ಲಿಂದು ಗರಿಷ್ಠ ಸಕ್ರಿಯ ಪ್ರಕರಣಗಳಿರುವ 10 ಜಿಲ್ಲೆಗಳನ್ನು ತಿಳಿಸಿದರು. ಪುಣೆ(59,475) ಮುಂಬೈ (46,248) ನಾಗಪುರ (45,322 ) ಥಾಣೆ (35,264) ನಾಸಿಕ್ (26, 553) ಔರಂಗಾಬಾದ್ (21,282)ಬೆಂಗಳೂರು ನಗರ (16,259) ನಂದೇಡ್ (15,171) ದೆಹಲಿ (8,032) ಅಹಮದಾನಗರ (7,952) ದೆಹಲಿಯಲ್ಲಿ ಅನೇಕ ಜಿಲ್ಲೆಗಳಿವೆ ಆದರೂ, ಒಂದು ಜಿಲ್ಲೆಯನ್ನು ಮಾತ್ರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೋವಿಡ್-19 ಪರಿಸ್ಥಿತಿ ತೀರಾ ಹದೆಗೆಡುತ್ತಿದೆ. ಕಳೆದ ಕೆಲ ವಾರಗಳಲ್ಲಿ, ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ದೊಡ್ಡ ಆತಂಕ ಕಾರಣವಾಗಿದೆ. ಯಾವುದೇ ರಾಜ್ಯವಾಗಲೀ ಅಥವಾ ಜಿಲ್ಲೆಯಾಗಲೀ ನಿರ್ಲಕ್ಷ್ಯ ವಹಿಸಬಾರದು  ಎಂದು ನೀತಿ ಆಯೋಗದ ಸದಸ್ಯ ವಿ. ಕೆ. ಪೌಲ್ ತಿಳಿಸಿದರು.

ಕೆಲ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರಗೊಂಡಿದ್ದು, ಇಡೀ ದೇಶ ಅಪಾಯದಲ್ಲಿದೆ. ಆದ್ದರಿಂದ ಸೋಂಕು ಹರಡದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದ್ದು, ಜೀವವನ್ನು ಉಳಿಸಬೇಕಾಗಿದೆ. ಸೋಂಕು ಹೆಚ್ಚಾದಂತೆ ಆರೋಗ್ಯ ಸೌಕರ್ಯಗಳನ್ನು ವ್ಯಾಪಕ ರೀತಿಯಲ್ಲಿ ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು.

ಪಾಸಿಟಿವಿಟಿ ದರ ಕುರಿತಂತೆ ತಿಳಿಸಿದ ಭೂಷಣ್, ಕಳೆದ ವಾರ ಮಹಾರಾಷ್ಟ್ರದಲ್ಲಿ ಸರಾಸರಿ ಪಾಸಿಟಿವಿಟಿ ದರ ಶೇ.23, ಪಂಜಾಬ್ ನಲ್ಲಿ ಶೇ. 8.82, ಛತ್ತೀಸ್ ಗಢದಲ್ಲಿ ಶೇ.8.24, ಮಧ್ಯಪ್ರದೇಶ ಶೇ.7.82, ತಮಿಳುನಾಡು ಶೇ.2.5, ಕರ್ನಾಟಕ ಶೇ. 2.45, ಗುಜರಾತ್ ಶೇ.2.22 ಮತ್ತು ದೆಹಲಿಯಲ್ಲಿ ಶೇ. 2.04ರಷ್ಟಿತ್ತು. ರಾಷ್ಟ್ರೀಯ ಪಾಸಿಟಿವಿಟಿ ದರ ಶೇ.5.65 ರಷ್ಟಿತ್ತು ಎಂದು ಅವರು ತಿಳಿಸಿದರು.

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಆರ್ ಟಿ- ಪಿಸಿಆರ್ ಪರೀಕ್ಷೆಯನ್ನು ಕೂಡಾ ಹೆಚ್ಚಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು. 

ಇಂದು ಬೆಳಗ್ಗೆ 10 ಗಂಟೆಯವರೆಗೂ ಒಟ್ಟಾರೇ, 6,11,13,354 ಡೋಸ್  ಕೋವಿಡ್-19 ಲಸಿಕೆ ನೀಡಲಾಗಿದೆ. ಸುಮಾರು 81, 74,916 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದು, 51, 88, 747 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 89,44,742 ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದರೆ, 37,11,221 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ತೆಲಂಗಾಣದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 48.39 ರಷ್ಟು ಮಂದಿ ಚಿಕಿತ್ಸೆ ಪಡೆಯುವ ಮೂಲಕ ರಾಜ್ಯಗಳ ಪೈಕಿಯಲ್ಲಿ ಅಗ್ರಸ್ಥಾನದಲ್ಲಿದೆ. ದೆಹಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!