ಉಡುಪಿ: ಬಾಲಕೃಷ್ಣ ಶಿಬಾರ್ಲ ಅವರ ‘ಕಾಪ’ ನಾಟಕ ಕೃತಿ ಬಿಡುಗಡೆ

ಉಡುಪಿ: ಜಾತಿ ತಾರತಮ್ಯ, ಶೋಷಣೆ ಈಗ ಇಲ್ಲ. ಹಿಂದೆಯಷ್ಟೇ ಇತ್ತು ಎಂಬುದು ಸುಳ್ಳು. ಈಗಲೂ ಜೀವಂತವಾಗಿದೆ ಎಂದು ಜನಪರ ಹೋರಾಟಗಾರ್ತಿ, ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದರು. ಉಡುಪಿಯ ಸುಮನಸಾ ಕೊಡವೂರು ಅಜ್ಜರಕಾಡು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ ಕಾರ್ಯಕ್ರಮದಲ್ಲಿ ಶುಕ್ರವಾರ ಬಾಲಕೃಷ್ಣ ಶಿಬಾರ್ಲ ಅವರ ತುಳು ನಾಟಕ ಕೃತಿ ಕಾಪ’ ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹಿಂದಿನ ಸ್ವರೂಪ ಈಗ ಇಲ್ಲದೇ ಇರಬಹುದು. ಸ್ವರೂಪ ಬದಲಾಯಿಸಿದ ರೀತಿಯಲ್ಲಿ ಈಗಲೂ ಇದೆ. ಈಗಲೂ ಸಮಾಜದ ಒಳ್ಳೆಯವರು ಎನ್ನಿಸಿಕೊಂಡವರು ಬೇರೆಯವರಿಗೆ ಅವಕಾಶ ನಿರಾಕರಿಸುವ ಕೆಲಸಗಳನ್ನು ಮಾಡುತ್ತಲೇ ಇವೆ. ತೆಂಕು ಪ್ರದೇಶಗಳಲ್ಲಿ ಇರುವ ಕಾಪ ಅಥವಾ ಕಾಪಡ ಎನ್ನುವುದು ಕೂಡ ಇಂಥ ಶೋಷಣೆಯ ಪಾತ್ರ. ಈ ನಾಟಕದ ಮೂಲಕ ಗೌರವಾನ್ವಿತರು ನಡೆಸುವ ಶೋಷಣೆ, ಕಾಪನ ಮಗ ಕಾಪನೇ ಆಗಬೇಕು ಎಂದು ಮಾಡುವ ತಂತ್ರಗಳು ಈ ನಾಟಕದಲ್ಲಿ ಅನಾವರಣಗೊಂಡಿದೆ ಎಂದು ವಿವರಿಸಿದರು. ಇಲ್ಲಿವರೆಗಿನ ಇತಿಹಾಸ ನಮ್ಮದಲ್ಲ. ನಮ್ಮ ವರು ಬರೆದ ಇತಿಹಾಸವೂ ಅಲ್ಲ,. ನಮ್ಮ ಇತಿಹಾಸವನ್ನು ನಾವೇ ಬರೆಯುವ ಕಾಲ ಬರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಮುಂದಾಳು ಅಚ್ಯುತ ಅಮೀನ್ ಮಾತನಾಡಿ, ಎಲ್ಲ ಬರವಣೆಇಗೆಯಲ್ಲಿ ನಾಯಕ ಪಾತ್ರ ಹಿಂದುಳಿದ ವರ್ಗದವರು ಆಗಿರುವುದಿಲ್ಲ. ಆದರೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬದಿಯ ನಾಯಿಗುತ್ತಿ, ಶಿವರಾಮ ಕಾರಂತರ ಚೋಮನದುಡಿಯ ಚೋಮ ಹೀಗೆ ಅಪರೂಪಕ್ಕೆ ನಾಯಕರಾಗಿದ್ದಾರೆ. ಕಾಪ ನಾಟಕವೂ ಅದೇ ರೀತಿ ಹಿಂದುಳಿದ ವರ್ಗದ ಹುಡುಗನನ್ನು ನಾಯಕನನ್ನು ಮಾಡಿದ ಕೃತಿ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಜು ಪೂಜಾರಿ, ನಗರಸಭೆ ಸದಸ್ಯ ದೇವದಾಸ ಶೆಟ್ಟಿಗಾರ್, ಕೃಷ್ಣಲೀಲಾದ ಕೃಷ್ಣ ದೇವಾಡಿಗ, ನಾರಾಯಣ ಗುರು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷೆ ವಿಜಯ ಜಿ. ಬಂಗೇರ, ಕೊಡವೂರು ಸಿ.ಎ. ಬ್ಯಾಂಕ್ ನಿರ್ದೇಶಕ ರತ್ನಾಕರ ಅಮೀನ್ ಮುಂತಾದವರು ಉಪಸ್ಥಿತರಿದ್ದರು.
ಕೃತಿಕಾರ ಬಾಲಕೃಷ್ಣ ಶಿಬಾರ್ಲ ಮಾತನಾಡಿದರು. ಪ್ರವೀಣ್‌ಚಂದ್ರ ತೋನ್ಸೆ ಸ್ವಾಗತಿಸಿದರು. ಶ್ರೀವತ್ಸ ರಾವ್ ವಂದಿಸಿದರು. ರಾಧಿಕಾ ದಿವಾಕರ್ ಕಾರ್‍ಯಕ್ರಮ ನಿರೂಪಿಸಿದರು. ಬಳಿಕ ಭೂಮಿಕಾ ಹಾರಾಡಿ ತಂಡದಿಂದ ನಮ್ಮ ನಿಮ್ಮೊಳಗೊಬ್ಬ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!