ಉಡುಪಿ: ಜಿಲ್ಲೆಯಲ್ಲಿ 156, ಮಣಿಪಾಲ ಎಂಐಟಿ ಕ್ಯಾಂಪಸ್ನಲ್ಲಿ 126 ಕೋವಿಡ್ ಪಾಸಿಟಿವ್ ಪತ್ತೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಒಂದೇ ಸಮನೆ ಏರುತ್ತಿದ್ದು, ಇಂದು ಉಡುಪಿ ಜಿಲ್ಲೆಯಲ್ಲಿ 156 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಪೈಕಿ ತಾಲೂಕಿನಲ್ಲಿ ಅತೀ ಹೆಚ್ಚು 134, ಕುಂದಾಪುರ 8, ಕಾರ್ಕಳ 13 ಹಾಗೂ ಹೊರ ಜಿಲ್ಲೆಯ 1 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 737 ಕ್ಕೆ ಏರಿಕೆಯಾಗಿದೆ. ಈಗಾಗಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿ ಸೀಲ್ಡೌನ್ ಆಗಿರುವ ಎಂಐಟಿ ಕ್ಯಾಂಪಸ್ನಲ್ಲಿ ಇಂದು 126 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಜಿಲೆಯಲ್ಲಿ ಮಾ.26 ರ ವರೆಗೆ 411,752 ಮಂದಿಯ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 24,946 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ವರೆಗೆ 24019 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದು, ಈ ವರೆಗೆ 190 ಮಂದಿ ಸೂಂಕಿನಿಂದ ಮೃತಪಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 2,886 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ರಾಜ್ಯದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 21,252 ಕ್ಕೆ ಏರಿಕೆ ಯಾಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಅಂದರೆ 1820 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಉಳಿದಂತೆ ಮೈಸೂರಿನಲ್ಲಿ 131, ಉಡುಪಿಯಲ್ಲಿ 156, ಕಲಬುರಗಿಯಲ್ಲಿ 147, ಕೊಡಗು 7, ದ.ಕ ಜಿಲ್ಲೆಯಲ್ಲಿ 39 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇಂದು ರಾಜ್ಯದಲ್ಲಿ 1179 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದು, 8 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.
ಈ ವರೆಗೆ ರಾಜ್ಯದಲ್ಲಿ ಒಟ್ಟು 9,83,930 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, 95,167 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ರಾಜ್ಯದಲ್ಲಿ ಕೋವಿಡ್ ಒಟ್ಟು 12,492 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಸದ್ಯ 196 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.