ಉಡುಪಿ: ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಆಟವಾಡುತ್ತಲೇ ಕುಸಿದು ಮೃತ್ಯು!

ಉಡುಪಿ: (ಉಡುಪಿ ಟೈಮ್ಸ್ ವರದಿ) ರಾಜ್ಯ ಮಟ್ಟದ ವಾಲಿಬಾಲ್ ಆಟಗಾರನೋರ್ವ ಆಟವಾಡುತ್ತಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ಉಡುಪಿಯ‌ ಇನ್ನಂಜೆಯಲ್ಲಿ‌ ನಡೆದಿದೆ

ಕುರ್ಕಾಲು ಸುಭಾಸ್ ನಗರ ನಿವಾಸಿ, ರಾಜ್ಯ ಮಟ್ಟದ ಹಲವಾರು ತಂಡಗಳಲ್ಲಿ ಆಟಗಾರನಾಗಿ ಆಡಿರುವ ಪಕ್ಕಿ ದೇವು ಯಾನೆ ದೇವರಾಜ್ (33) ಮೃತ ವಾಲಿವಾಲ್ ಆಟಗಾರ.

ಶನಿವಾರ ರಾತ್ರಿ ಇನ್ನಂಜೆಯಲ್ಲಿ‌ ನಡೆಯುತ್ತಿದ್ದ ಇನ್ನಂಜೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇನ್ನಂಜೆ ಚಾಲೆಂಜರ್ಸ್ ತಂಡದ ಪರವಾಗಿ ಆಟವಾಡುತ್ತಿದ್ದ ದೇವರಾಜ್ ಅವರು ರಾತ್ರಿ ಒಂದು ಗಂಟೆಯ ವೇಳೆಗೆ ಆಟವಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲೇ‌ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ರಾಜ್ಯ ಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ದೇವು, ಆರಂಭದಲ್ಲಿ ಕುರ್ಕಾಲು ಸುಭಾಸ್ ನಗರ ತಂಡದ ಆಟಗಾರನಾಗಿ, ಬಳಿಕ ರಾಜ್ಯ ಮಟ್ಟದ ವಿವಿಧ ತಂಡಗಳಲ್ಲಿ ಆಟಗಾರನಾಗಿ ವಾಲಿಬಾಲ್ ಆಟದಲ್ಲಿ ನಿರತರಾಗಿದ್ದರು.

ಉತ್ತರ ಕನ್ನಡದ ವಿವಿಧ ತಂಡಗಳ ಪರವಾಗಿಯೂ ಆಟವಾಡಿದ್ದ ಅವರು ಪಕ್ಕಿ ದೇವು ಎಂದೇ ಪರಿಚಿತನಾಗಿದ್ದರು. ಅವರ ಅಕಾಲಿಕ ಅಗಲುವಿಕೆ ವಾಲಿಬಾಲ್ ಆಟಗಾರರು ಮತ್ತು ಅಪಾರ‌ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ‌ ಮುಳುಗಿಸಿದೆ.

ಅವರು ಮೃತಪಟ್ಟ ಸುದ್ಧಿ ತಿಳಿಯುತ್ತಲೇ ಆಯೋಜಕರು ಇನ್ನಂಜೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿಯನ್ನು ಅರ್ಧಕ್ಕೆ ಸ್ಥಗಿತಗೊಳಿದ್ದಾರೆ.

ಅವಿವಾಹಿತರಾಗಿದ್ದ ಅವರು ನಾಲ್ಕು ತಿಂಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಮತ್ತು ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!