ಶ್ರೀಕೃಷ್ಣ ಮಠ: ಮೂಲಸೌಕರ್ಯ ಅಭಿವೃದ್ಧಿಗೆ ₹1 ಕೋ. ವೆಚ್ಚದ ಕಾಮಗಾರಿ

ಉಡುಪಿ: ಅದಮಾರು ಮಠದ ಪರ್ಯಾಯದ ಅವಧಿಯಲ್ಲಿ ಕೃಷ್ಣ ಮಠದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ₹ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಗಳು ನಡೆಯುತ್ತಿವೆ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.

ಶನಿವಾರ ಕನಕ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಕ್ಕೆ ಬಣ್ಣ, ಎಲೆಕ್ಟ್ರಿಕಲ್‌ ಹಾಗೂ ಕಾಮಗಾರಿಗೆ ₹ 31.88 ಲಕ್ಷ, ಯಾತ್ರಾರ್ಥಿಗಳ ವಿಶ್ವಪಥ ನಿರ್ಮಾಣಕ್ಕೆ ₹ 52.63 ಲಕ್ಷ ಖರ್ಚಾಗಿದೆ. ₹ 15 ಲಕ್ಷ ವೆಚ್ಚದಲ್ಲಿ ಮಧ್ವ ಸರೋವರದ ಎದುರು ಭಾಗದ ನವೀಕರಣ, ₹20 ಲಕ್ಷ ವೆಚ್ಚದಲ್ಲಿ ಮಧ್ವ ಗುಂಡಿಯ ನವೀಕರಣ ಕಾರ್ಯ ನಡೆಯುತ್ತಿದೆ ಎಂದು ವಿವರ ನೀಡಿದರು.

ಸ್ಥಳೀಯ ಭಕ್ತರಿಗೆ ಶೀಘ್ರ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಸುದರ್ಶನ ಪಾಸ್‌ ವ್ಯವಸ್ಥೆ ಮಾಡಲಾಗಿ ದ್ದು, ಇದುವರೆಗೂ 7,000 ಮಂದಿ ಪಾಸ್ ಪಡೆದುಕೊಂಡಿದ್ದಾರೆ. ಯಾತ್ರಾರ್ಥಿಗಳಿಗೆ ಅಷ್ಟಮಠಗಳ ದರ್ಶನ, ಕಟ್ಟಿಗೆ ರಥ, ಸರೋವರ, ಕೃಷ್ಣನ ಗರ್ಭಗುಡಿಗೆ ಹೊದಿಸಿರುವ ಚಿನ್ನದ ಮಾಡಿನ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿಶ್ವಪಥ ದರ್ಶನ ವ್ಯವಸ್ಥೆ ಆರಂಭಿಸಲಾಗಿದೆ.

ಹೊಸ ದರ್ಶನ ವ್ಯವಸ್ಥೆಗೆ ಭಕ್ತರು ಹೊಂದಿಕೊಳ್ಳುತ್ತಿದ್ದಾರೆ. ವಿಶ್ವಪಥದಲ್ಲಿ ದರ್ಶನಕ್ಕೆ ಕಷ್ಟವಾಗುವ ವೃದ್ಧರಿಗೆ ಸುದರ್ಶನ ಪಾಸ್‌ ಮಾರ್ಗದಲ್ಲಿ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಗೋವಿಂದರಾಜ್ ತಿಳಿಸಿದರು.

ಕೋವಿಡ್‌ ಪೂರ್ವದಂತೆಯೇ ಭಕ್ತರು ಕೃಷ್ಣಮಠಕ್ಕೆ ಭೇಟಿನಿಡುತ್ತಿದ್ದು, ಪ್ರತಿದಿನ 8,000 ರಿಂದ 10,000 ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಭಕ್ತರ ಸಂಖ್ಯೆ 15,000 ಮುಟ್ಟುತ್ತಿದೆ. ದೇವರ ಸೇವೆಗಳು ಎಂದಿನಂತೆ ನಡೆಯುತ್ತಿವೆ. ಕೋವಿಡ್‌ ಮಾರ್ಗಸೂಚಿಯಂತೆ ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಧವ ಉಪಾಧ್ಯಾಯ, ವೈಎನ್‌.ರಾಮಚಂದ್ರ ರಾಯರು, ಪ್ರದೀಪ್ ರಾವ್‌ ಇದ್ದರು.

Leave a Reply

Your email address will not be published. Required fields are marked *

error: Content is protected !!