ವಕೀಲರು ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಳ್ಳಿ: ಹೈ.‌ನ್ಯಾ. ಅರವಿಂದ್ ಕುಮಾರ್

ಉಡುಪಿ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆರಂಭವಾದ 2 ದಿನಗಳ ರಾಜ್ಯಮಟ್ಟದ ವಕೀಲರ ಸಾಂಸ್ಕೃತಿಕ ಸ್ಪರ್ಧೆಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಅರವಿಂದ್ ಕುಮಾರ್ ಉದ್ಘಾಟಿಸಿದರು.

ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಉಳಿಸುವುದು ನಾಗರಿಕರ ಕರ್ತವ್ಯ ಎಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಈ ವಿಚಾರದಲ್ಲಿ ವಕೀಲರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ  ಎಂದರು.

ವಕೀಲರು ಕೆಲಸಕ್ಕೆ ಪ್ರತಿಯಾಗಿ ಹಣ ಪಡೆಯುತ್ತಾರೆ ಎಂಬುದರ ಹೊರತಾಗಿಯೂ ಸಮಾಜದ ಏಳ್ಗೆಗೆ ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಚಿಸಬೇಕು, ಬಿಪಿಎಲ್ ಕಾರ್ಡ್, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಕೊಡಿಸುವಲ್ಲಿ ನೆರವಾಗಬಹುದು. ಜನರ ಬಳಿಗೆ ವಕೀಲರು ಹೋಗಬೇಕು ಎಂದು ಸಲಹೆ ನೀಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮಾತನಾಡಿ, ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳ ಒತ್ತಡದಲ್ಲಿ ಸಿಲುಕಿರುವ ವಕೀಲರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒತ್ತಡ ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೈಕೋರ್ಟ್‌ ನ್ಯಾಯ ಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ, ಬೆಳಗಾವಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿ.ಎಂ.ಜೋಷಿ, ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಜೆ.ಎನ್‌.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ರಾಘವೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ.ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು, ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. 

Leave a Reply

Your email address will not be published. Required fields are marked *

error: Content is protected !!