ಉಡುಪಿ: ಕೌಟುಂಬಿಕ ನ್ಯಾಯಾಲಯ ಉದ್ಘಾಟನೆ
ಉಡುಪಿ: ಕೌಟುಂಬಿಕ ನ್ಯಾಯಾಲಯಗಳ ಕಾರ್ಯವೈಖರಿ ಇತರೆ ನ್ಯಾಯಾಲಯಗಳಿಗಿಂತ ಭಿನ್ನವಾದುದು. ಇಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥವೇ ಮುಖ್ಯವಲ್ಲ, ರಾಜಿಸಂಧಾನದಲ್ಲಿ ದಾಂಪತ್ಯವನ್ನು ಒಂದುಗೂಡಿಸಲು ಅವಕಾಶ ನೀಡಲಾಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹೇಳಿದರು.
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವರ್ಚುವಲ್ ಮೂಲಕ ಕೌಟುಂಬಿಕ ನ್ಯಾಯಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೌಟುಂಬಿಕ ನ್ಯಾಯಾಲಯಗಳು ಸಿವಿಲ್ ನ್ಯಾಯಾಲಯಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ವಿಶೇಷ ಕೌಶಲ ಅಗತ್ಯ. ಕುಟುಂಬದ ಮುಖ್ಯಸ್ಥನ ನೆಲೆಯಲ್ಲಿಯೂ ಪ್ರಕರಣವನ್ನು ನೋಡಬೇಕಾಗುತ್ತದೆ ಎಂದರು.
ಉಡುಪಿಯಲ್ಲಿ ಕೌಟುಂಬಿಕ ನ್ಯಾಯಾಲಯ ಆಗಬೇಕೆಂಬ ಬಹು ದಿನಗಳ ಬೇಡಿಕೆ ಈಡೇರಿದ್ದು, ನ್ಯಾಯಾಧೀಶರು ಹಾಗೂ ವಕೀಲರು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಯ ಹಿಂದಿನ ಉದ್ದೇಶ ಸಾಕಾರವಾಗಲಿ ಎಂದರು. ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾತನಾಡಿ, ಬಹಳಷ್ಟು ಭೂಸ್ವಾಧೀನ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಯೋಜನೆಗಳ ವೆಚ್ಚವೂ ಹೆಚ್ಚಾಗುತ್ತಿದೆ. ಜಿಲ್ಲಾಧಿಕಾರಿ ಹಂತದಲ್ಲಿ ಬಗೆಹರಿಯುವಂಥ ಪ್ರಕರಣಗಳಿದ್ದರೆ ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು’ ಎಂದು ಸಲಹೆ ನೀಡಿದರು.
ವಿಮಾ ಕಂಪನಿಗಳು ಗ್ರಾಹಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ಹೆಚ್ಚಿನ ಕಾಲ ತೆಗೆದುಕೊಂಡಷ್ಟು ಗ್ರಾಹಕರಿಗೆ ಪಾವತಿಸಬೇಕಾದ ಮೊತ್ತದ ಪ್ರಮಾಣ ಏರಿಕೆಯಾಗಲಿದೆ. ಸಮಯವೂ ವ್ಯರ್ಥ, ಪ್ರಕರಣಗಳ ನಿರ್ವಹಣೆಗೆ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ. ಲೋಕ ಅದಾಲತ್ನಲ್ಲಿ ಬಗೆಹರಿಸಿ ಕೊಳ್ಳಬಹುದಾದ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು. ಶೇ 90ರಷ್ಟು ಚೆಕ್ಬೌನ್ಸ್ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಪೊಲೀಸರು ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸಬೇಕು. ಕಾನೂನುಗಳ ಪಾಲನೆ ಹಾಗೂ ದಂಡ ಕಟ್ಟುವ ವಿಧಾನಗಳ ಕುರಿತು ಸಮಾಧಾನದಿಂದ ತಿಳಿ ಹೇಳಿದರೆ, ಭಯ ನಿವಾರಣೆಯಾಗಿ, ಜನಸ್ನೇಹಿ ವ್ಯವಸ್ಥೆ ಜಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಎಸ್ಪಿ ಸೂಚನೆ ನೀಡಬೇಕು ಎಂದು ತಿಳಿಸಿದರು.
ಮಾರ್ಚ್ 27ರಂದು ಉಡುಪಿ, ಕುಂದಾಪುರ, ಕಾರ್ಕಳ ನ್ಯಾಯಾಲಯಗಳ ಆವರಣದಲ್ಲಿ ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದೆ. ನ್ಯಾಯಾಧೀಶರು, ವಕೀಲರು ಪರಸ್ಪರ ಸಹಕಾರದೊಂದಿಗೆ ರಾಜಿಸಂಧಾನದ ಮೂಲಕ ಹೆಚ್ಚಿನ ಪ್ರಕರಣಗಳನ್ನು ಬಗೆಹರಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಗಳಾದ ಜಾನ್ ಮೈಕಲ್ ಡಿಕುನ್ಹಾ, ಸೂರಜ್ ಗೋವಿಂದರಾಜ್, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್, ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.