ದ.ಕ. ಉಡುಪಿ ಸಹಿತ 8 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ದಿಢೀರ್‌ ಹೆಚ್ಚಳ: ಪರಿಷ್ಕ್ರತ ಮಾರ್ಗ ಸೂಚಿ ಪ್ರಕಟ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳ ಕಂಡುಬಂದಿದ್ದು, ಎರಡನೇ ಅಲೆಯ ಭೀತಿ ಎದುರಾಗಿದೆ.

ಹರಡುವಿಕೆಯ ವೇಗಕ್ಕೆ ಕಡಿವಾಣ ಹಾಕಲು ಪರೀಕ್ಷಾ ಪ್ರಮಾಣ ಹೆಚ್ಚಳ, ಸಭೆ, ಸಮಾರಂಭಗಳಿಗೆ ಜನಸಂಖ್ಯೆ ಮಿತಿ ಪರಿಷ್ಕರಣೆ ಸೇರಿದಂತೆ ಆರೋಗ್ಯ ಇಲಾಖೆ ಶುಕ್ರವಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ಅಂತರ ರಾಜ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳು, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಪ್ರದೇಶಗಳು ಹಾಗೂ ಸಂಪರ್ಕಿತರಲ್ಲಿ ಸೋಂಕು ಹೆಚ್ಚಿನ ಪ್ರಮಾಣ ದಲ್ಲಿ ಕಂಡುಬಂದಿರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.

ಬೆಂಗಳೂರು ನಗರ, ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನ ಕಳೆದಂತೆ ಗಣನೀಯವಾಗಿ ಏರುತ್ತಿದೆ. ಗುರುವಾರ ಸಭೆ ನಡೆಸಿದ್ದ ರಾಜ್ಯಮಟ್ಟದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಈ ಕುರಿತು ಪರಿಶೀಲನೆ ನಡೆಸಿ, ಎರಡನೇ ಅಲೆಯ ಅಪಾಯ ತಡೆಯಲು ಕೆಲವು ಶಿಫಾರಸು ಗಳನ್ನು ಮಾಡಿತ್ತು. ಅದರಂತೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಸುತ್ತೋಲೆ ಹೊರಡಿಸಲಾಗಿದೆ.

ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಜಿಲ್ಲೆಗಳಲ್ಲಿ ಕೋವಿಡ್‌ ಪರೀಕ್ಷಾ ಪ್ರಮಾಣದ ಗುರಿ ಹೆಚ್ಚಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಕನಿಷ್ಠ 40,000 ಮಾದರಿಗಳ ಪರೀಕ್ಷೆ ನಡೆಸಬೇಕು. ಎಲ್ಲ ಜಿಲ್ಲೆಗಳಲ್ಲೂ ದೈನಂದಿನ ಕೋವಿಡ್‌ ಪರೀಕ್ಷಾ ಗುರಿಯನ್ನು ಪೂರ್ಣ ಪ್ರಮಾಣದಲ್ಲಿ ತಲು ಪಬೇಕು ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕಲಬುರ್ಗಿ ಮತ್ತು ಉಡುಪಿ ಜಿಲ್ಲೆಗಳಲ್ಲಿ 1:20ರ ಅನುಪಾತದಲ್ಲಿ ಸೋಂಕಿತರನ್ನು ಪತ್ತೆಹೆಚ್ಚಬೇಕು ಎಂದು ಸೂಚಿಸಲಾಗಿದೆ.

ಮಿತಿ ಪಾಲನೆಗೆ ತಾಕೀತು: ಮದುವೆ, ನಾಮಕರಣ ಸೇರಿದಂತೆ ಇತರ ಸಮಾರಂಭಗಳು, ಮೃತರ ಅಂತಿಮ ದರ್ಶನ, ಅಂತ್ಯಕ್ರಿಯೆ, ಧಾರ್ಮಿಕ ಆಚರಣೆಗಳು, ರಾಜಕೀಯ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಕೆಲವು ದಿನಗಳಿಂದ ಸಡಿಲಿಸಲಾಗಿತ್ತು. ಜನಸಂಖ್ಯೆಯ ಮಿತಿ ವಿಧಿಸಿದ್ದರೂ, ಕಟ್ಟುನಿಟ್ಟಾಗಿ ಪಾಲಿಸುವುದನ್ನು ಕಡ್ಡಾಯಗೊಳಿಸಿರಲಿಲ್ಲ. ಆದರೆ, ಎರಡನೇ ಅಲೆಯ ಭೀತಿಯಿಂದ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಜನರ ಮಿತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಹೊಸ ಮಾರ್ಗಸೂಚಿಯಲ್ಲಿ ತಾಕೀತು ಮಾಡಲಾಗಿದೆ.

‘ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ ಸೋಂಕು ಹರಡುವ ಅಪಾಯವಿದೆ. ಅದನ್ನು ನಿಯಂತ್ರಿಸಲು ನಿಗದಿಪಡಿಸಿರುವ ಜನಸಂಖ್ಯೆಯ ಮಿತಿಗೆ ಅನುಗುಣವಾಗಿಯೇ ಸಭೆ, ಸಮಾರಂಭಗಳಿಗೆ ಅನುಮತಿ ನೀಡಬೇಕು. ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ವಿತರಣೆಗೆ ವೇಗ ನೀಡಬೇಕು. ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿರುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು‘ ಎಂದು ಸೂಚನೆ ನೀಡಲಾಗಿದೆ.

ಕೋವಿಡ್‌ ಪರೀಕ್ಷೆ ಪರಿಷ್ಕೃತ ಗುರಿ
ಬೆಂಗಳೂರು ನಗರ ಜಿಲ್ಲೆ ಮತ್ತು ಬಿಬಿಎಂಪಿ– 40,000
ಮೈಸೂರು– 5,000
ತುಮಕೂರು– 3,500
ಬೆಳಗಾವಿ– 3,000
ದಕ್ಷಿಣ ಕನ್ನಡ– 3,000
ಉಡುಪಿ– 2,000
ವಿಜಯಪುರ– 2,000
ಕೊಡಗು– 1,000 

Leave a Reply

Your email address will not be published. Required fields are marked *

error: Content is protected !!