ಹೆಜಮಾಡಿ: ದುಬಾರಿ ಟೋಲ್ ವಿರೋಧಿಸಿ ಮಾ.15ರಿಂದ ಖಾಸಗಿ ಬಸ್ ಸಂಚಾರ ಸ್ಥಗಿತ?
ಉಡುಪಿ: ಹೆಜಮಾಡಿ ಟೋಲ್ ಮೂಲಕ ಸಾಗುವ ಬಸ್ಸುಗಳಿಗೆ ದುಬಾರಿ ಶುಲ್ಕವನ್ನು ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಮಾರ್ಚ್ 15 ರಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ಖಾಸಗಿ ಬಸ್ ಮಾಲಕರು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಸ್ ಮಾಲಕರು, ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಟೋಲ್ ಗೇಟ್ ಗಳಲ್ಲಿ ದುಬಾರಿ ಟೋಲ್ ಈಗ ಬಸ್ ಮಾಲಕರಿಗೆ ಸಂಕಷ್ಟ ತಂದೊಡ್ಡಿದೆ. ದುಬಾರಿ ಶುಲ್ಕದಿಂದ ಬಸ್ ಮಾಲಕರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ತಿಂಗಳಿಗೆ 15 ಸಾವಿರ ರೂಪಾಯಿ ಆರ್ ಟಿಒ ತೆರಿಗೆ ಪಾವತಿಸುತ್ತೇವೆ. ಬದಲಾದ ಸನ್ನಿವೇಶದಲ್ಲಿ ಟ್ರಿಪ್ಪಿನ ಮೇಲೆ 250 ರೂಪಾಯಿ ಹೆಚ್ಚುವರಿ ನೀಡಬೇಕಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ತಕ್ಷಣವೇ ಮಧ್ಯೆ ಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ನೀಡಬೇಕು. ಸ್ವಲ್ಪ ಪ್ರಮಾಣದ ಟೋಲ್ ಪಾವತಿಗೆ ಸಿದ್ಧರಿದ್ದೇವೆ, ಆದರೆ ಹೊಸ ಪದ್ಧತಿಯಂತೆ, ಮಾಸಿಕ 25ಸಾವಿರ ರೂಪಾಯಿಗೂ ಅಧಿಕ ಸುಂಕ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ಈ ಮಾರ್ಗದಲ್ಲಿ ಸುಮಾರು 40 ಬಸ್ ಗಳು ಸಂಚರಿಸುತ್ತಿದ್ದು, ಕೊರೋನಾ ಬಂದ ನಂತರ 32 ಬಸ್ಸುಗಳು ಮಾತ್ರ ರಸ್ತೆಗಿಳಿದಿವೆ. ದುಬಾರಿ ಟೋಲ್ ಕಟ್ಟಿ ಸಂಚಾರ ನಡೆಸುವುದು ಕಷ್ಟಕರವಾಗಿದ್ದು, ಅನಿವಾರ್ಯವಾಗಿ ಬಸ್ ಸಂಚಾರ ಸ್ಥಗಿತಗೊಳಿಸಬೇಕಾಗಿದೆ ಎಂದು ತಿಳಿಸಿದ್ದಾರೆ.