ಹೆಚ್ಚಿದ ಕೊರೋನಾ ಪಾಸಿಟಿವ್ ಪ್ರಕರಣ: ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರಕಾರ ನಿಷೇಧ!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತೆ ಉಲ್ಬಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲಾ ರೀತಿಯ ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರಕಾರ ನಿಷೇಧ ಹೇಳಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು,  ಇಂದಿನಿಂದ ರಾಜ್ಯಾದ್ಯಂತ, ಪ್ರಮುಖವಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ  ಸ್ಟಾರ್ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ರಾತ್ರಿ ಹೊತ್ತು ನಡೆಯುವ ಪಾರ್ಟಿಗಳನ್ನು ನಡೆಸುವುದರ ಮೇಲೆ ನಿಷೇಧ ಹೇರಲಾಗಿದೆ.

ಈ ಪಾರ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಇದು ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡುವಿಕೆಗೆ ಕಾರಣವಾಗುವ ಸಾಧ್ಯತೆಗಳು ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಷೇಧವು ಮುಂದಿನ ಆದೇಶದ ವರೆಗೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಇದರೊಂದಿಗೆ ಮದುವೆ ಕಾರ್ಯಕ್ರಮಗಳು ಹಾಗೂ ಹೆಚ್ಚು ಜನರು ಸೇರುವ ಎಲ್ಲಾ ಕಾರ್ಯಕ್ರಮಗಳ ಮೇಲೂ ನಿಗಾ ಇಟ್ಟಿರುವುದಾಗಿ ತಿಳಿಸಿದ್ದಾರೆ. “ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲದಿದ್ದರೂ, ಮದುವೆಗಳು ಮತ್ತು ಇತರ ಕಾರ್ಯಗಳಲ್ಲಿ ಹೆಚ್ಚಿನ ಜನರು ಸೇರುವುದನ್ನು ಮಾ.31 ರ ವರೆಗೆ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಮಾ.10 ರಂದು ರಾಜ್ಯದಲ್ಲಿ 760 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ 7,456 ಸಕ್ರಿಯ ಪ್ರಕರಣಗಳು ಸೇರಿದಂತೆ ಒಟ್ಟು 9,56,801 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಈ ವರೆಗೆ ಚೇತರಿಸಿಕೊಂಡಿರುವವರ ಸಂಖ್ಯೆ 9,36,947 ಕ್ಕೆ ಏರಿಕೆ ಯಾಗಿದ್ದು, ಕಳೆದ 24 ಗಂಟೆಗಳಲ್ಲಿ 331 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ಮಾ.11 ರಂದು 6 ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ 5 ಮಂದಿ ಬೆಂಗಳೂರು ಮತ್ತು 1 ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ರಾಜ್ಯದ ಕೋವಿಡ್ ನಿಂದ ಮೃತಪಟ್ಟಿರುವವರ ಸಂಖ್ಯೆ 12,379 ಕ್ಕೆ ತಲುಪಿದೆ.

Leave a Reply

Your email address will not be published. Required fields are marked *

error: Content is protected !!