ಆರ್ಥಿಕ ಹಿಂಜರಿತದ ನಡುವೆ ಮಹಿಳಾ ಮತ್ತು ರೈತ ಪರ ಬಜೆಟ್: ಕುಯಿಲಾಡಿ

ಉಡುಪಿ: ಕೋವಿಡ್-19 ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ಹಿಂಜರಿತದ ನಡುವೆ ರಾಜ್ಯ ಬಜೆಟ್ ಸಮತೋಲಿತ ಮಹಿಳಾ ಮತ್ತು ರೈತ ಪರ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಲಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಂಡು ಮಂಡಿಸಿರುವ ಜನಪರ ಬಜೆಟ್ ಇದಾಗಿದೆ. ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿರುವ ಮುಖ್ಯಮಂತ್ರಿಗಳು ಮೀನುಗಾರ ವೃತ್ತಿಯ ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್ ಡಿಸೀಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡಿಸೀಲ್ ಡೆಲಿವರಿ ಪಾಯಿಂಟ್ ನಲ್ಲಿಯೇ ಕರ ರಹಿತ ದರದಲ್ಲಿ ಡಿಸೀಲ್ ವಿತರಣೆಗೆ ಕ್ರಮ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರೂ.62 ಕೋಟಿ ಅನುದಾನ, ಕಡಲ ಕಿನಾರೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ.500 ಕೋಟಿ ರೂ.ಗಳ ಯೋಜನೆ, ಕರಾವಳಿ ಕಾವಲು ಪಡೆ ಸಶಕ್ತೀಕರಣ, ಹಂಗಾರಕಟ್ಟದಿಂದ ಮಣಿಪಾಲದವರೆಗೆ ಜಲಮಾರ್ಗ ಅಭಿವೃದ್ದಿ ಪ್ರಸ್ತಾವನೆ.

ತ್ರಾಸಿ ಮರವಂತೆ ಒತ್ತಿನೆಣೆ ಇತರ ಕಡಲ ತೀರದ ಸಮಗ್ರ ಅಭಿವೃದ್ಧಿ, 10 ಕೋಟಿ ವೆಚ್ಚದಲ್ಲಿ ಸೋಮೇಶ್ವರ ಕಡಲತೀರ ಪ್ರವಾಸೋದ್ಯಮ ಅಭಿವೃದ್ಧಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರ ಸ್ಮರಣಾರ್ಥ ಸ್ಮøತಿ ವನ ನಿರ್ಮಾಣಕ್ಕೆ 2 ಕೋಟಿ, ಕರಾವಳಿ ಕಾವಲು ಪಡೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅಭಿವದ್ಧಿ ಮಂಡಳಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಮುಂತಾದ ಅಭಿವೃದ್ಧಿ ಪರ ಯೋಜನೆಗಳನ್ನು ಘೋಷಿಸಿದ್ದಾರೆ.
ಇದರೊಂದಿಗೆ,ಮಹಿಳಾ ಅಭಿವೃದ್ಧಿ ಯೋಜನೆಗಳಿಗೆ 37,188 ಕೋಟಿ ರೂ. ಮೀಸಲಿಡಲಾಗಿದ್ದು, ಮಹಿಳಾ ಉದ್ಯಮಿಗಳಿಗೆ 4% ಬಡ್ಡಿ ದರದಲ್ಲಿ 2 ಕೋಟಿ ರೂ.ವರೆಗೆ ಸಾಲ ಸೌಲಭ್ಯ, ಸ್ವಉದ್ಯೋಗ ಮಾಡುವ 85,000 ಮಹಿಳೆಯರಿಗೆ ಕಿರು ಸಾಲ ಸೌಲಭ್ಯ, ಸರಕಾರಿ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳ ಮಕ್ಕಳ ಆರೈಕೆ ರಜೆ ಇತ್ಯಾದಿ ಘೋಷಣೆಗಳು ಮಹಿಳಾ ಸಬಲೀಕರಣದತ್ತ ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 31,028 ಕೋಟಿ ರೂ. ಮೀಸಲಿರಿಸಿದ್ದು ಆಹಾರ ಧಾನ್ಯಗಳ ಉತ್ಪಾದನೆಗೆ ವಿಶೇಷ ಒತ್ತು ನೀಡಲಾಗಿದೆ. ಸಾವಯವ ಕೃಷಿಗೆ ಉತ್ತೇಜನ, ಮಾರುಕಟ್ಟೆಗಳ ಮತ್ತು ಆಹಾರ ಸಂಸ್ಕರಣಾ ಘಟಕಗಳ ಅಭಿವೃದ್ಧಿ ಮುಂತಾದ ಘೋಷಣೆಗಳ ರೈತ ಪರ ಬಜೆಟ್ ಇದಾಗಿದೆ ಎಂದರು.

ಕೋವಿಡ್ -19 ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದ ನಡುವೆಯೂ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ 2.46.207 ಕೋಟಿ ರೂ.ಗಳ ಮಹಿಳಾ ಮತ್ತು ರೈತ ಪರ ಸಮತೋಲಿತ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಜನತೆಗೆ ಯಾವುದೇ ಹೆಚ್ಚುವರಿ ಅಥವಾ ಹೊಸ ತೆರಿಗೆಯ ಹೊರೆ ಹೊರಿಸದೆ ಎಲ್ಲಾ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಲಾ ಜಿ. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!