| ಉಡುಪಿ: ನಮ್ಮ ಕುಡ್ಲ ವಾಹಿನಿಯ ನೂತನ ಪರಿಕಲ್ಪನೆಯಾದ ನಮ್ಮ ಕುಡ್ಲ ಟ್ಯಾಕೀಸ್ ಮಾ.7 ರಂದು ಶುಭಾರಂಭಗೊಳ್ಳಲಿದೆ. ನಮ್ಮ ಕುಡ್ಲ ಟಾಕೀಸ್ ಒಂದು ವಿನೂತನ ಪ್ರಯತ್ನವಾಗಿದ್ದು ಈ ಮೂಲಕ ತುಳು ಚಿತ್ರ ರಸಿಕರು ತಮ್ಮ ಮನೆಯಲ್ಲಿಯೇ ಕೂತು ಹೊಚ್ಚ ಹೊಸ ತುಳು ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಇದು ತುಳು ಚಿತ್ರದ ಪಾಲಿಗೆ ಹೊಸ ಆಶಾ ಕಿರಣವಾಗಿದ್ದು, ತಿಂಗಳಿಗೊಂದು ಹೊಸ ತುಳು ಸಿನಿಮಾ ನಮ್ಮ ಕುಡ್ಲ ಟಾಕೀಸ್‍ನಲ್ಲಿ ಪ್ರತೀ ಭಾನುವಾರ ಮೂರು ಪ್ರದರ್ಶನಗಳಂತೆ 12 ಬಾರಿ ಪ್ರದರ್ಶನ ಕಾಣಲಿದೆ.
ಈ ಬಗ್ಗೆ ಉಡುಪಿಯಲ್ಲಿ ಮಾಹಿತಿ ನೀಡಿದ ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರ ಅವರು, ನಮ್ಮ ಕುಡ್ಲ ಟಾಕೀಸ್ ಎನ್ನುವುದು ನಿಮ್ಮ ಮನೆಯೇ ಟಾಕೀಸ್ ಎಂಬ ಪರಿಕಲ್ಪನೆಯಾಗಿದೆ. ಈ ಮೂಲಕ ಕೇಬಲ್ ಟಿವಿ ಸಂಪರ್ಕ ಇರುವ ಮನೆಗಳಲ್ಲಿ ಟಿವಿ ಮೂಲಕ ಹೊಚ್ಚ ಹೊಸ ತುಳು ಸಿನೆಮಾವನ್ನು ನೋಡುವ ಅವಕಾಶ ಪಡೆದುಕೊಳ್ಳಬಹುದಾಗಿದೆ. ಮಲ್ನಾಡ್ ಇನ್ಫೋಟೆಕ್ ಹಾಗೂ ವಿ4 ಇನ್ಫೋಟೆಕ್ ಸಂಪರ್ಕದ ಎಲ್ಲಾ ಕೇಬಲ್ ಆಪರೇಟರ್‍ಗಳ ಮೂಲಕ ಗ್ರಾಹಕರಿಗೆ ನಮ್ಮ ಕುಡ್ಲ ಟಾಕೀಸ್ ಎಂಬ ಪ್ರತ್ಯೇಕ ಚ್ಯಾನೆಲ್‍ನ ಸಂಪರ್ಕ ವ್ಯವಸ್ಥೆ ಪಡೆದುಕೊಳ್ಳ ಬಹುದಾಗಿದೆ. ಈ ಚಾನೆಲ್ ಮೂಲಕ ಸಾಮಾನ್ಯ ಟಿವಿಯಲ್ಲಿ ಸಿನೆಮಾ ವೀಕ್ಷಣೆ ಮಾಡಲು ರೂ 120 ಹಾಗೂ ವಿಶೇಷ ಟಿ.ವಿ ಯಲ್ಲಿ ರೂ 160 ಪಾವತಿಸಬೇಕಾಗುತ್ತದೆ. ಈ ಚಾನೆಲ್ ಮೂಲಕ ಹೊಚ್ಚ ಹೊಸ ತುಳು ಚಿತ್ರಗಳನ್ನು ಮನೆಯಲ್ಲೇ ಕೂತು ವೀಕ್ಷಿಸಬಹುದಾಗಿದೆ. ಚ್ಯಾನೆಲ್ ಸಂಖ್ಯೆ 88 ಅಥವಾ 888 ರಲ್ಲಿ ಪ್ರತೀ ಭಾನುವಾರ 3 ದೇಖಾವೆಗಳನ್ನು ಒಂದು ತಿಂಗಳ ಪರ್ಯಂತ ಒಟ್ಟು 12 ಸಲ ನಮ್ಮ ಕುಡ್ಲ ಟಾಕೀಸ್‍ನಲ್ಲಿ ವೀಕ್ಷಿಸಬಹುದು. ಗ್ರಾಹಕರು ಸಿನೆಮಾ ವೀಕ್ಷಣೆ ಮಾಡಲು ತಮ್ಮ ಕೇಬಲ್ ಅಪರೇಟರ್‍ರನ್ನು ಸಂಪರ್ಕಿಸಬಹುದಾಗಿದೆ ಎಂದರು.
ಈ ಬಗ್ಗೆ ಮಾತು ಮುಂದುವರೆಸಿದ ಅವರು, ಮಾ.7 ರಂದು ನಮ್ಮ ಕುಡ್ಲ ಟ್ಯಾಕೀಸ್ ಶುಭಾರ0ಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಚಾನೆಲ್‍ನಲ್ಲಿ ಮೊದಲ ಚಿತ್ರ ಪೆಪ್ಪೆರೆರೆ ಪೆರೆರೆರೆ ಮಾ 7 ರಂದು ಪ್ರದರ್ಶನ ಗೊಳ್ಳಲಿದೆ. ಈ ಚಿತ್ರ ಮಧ್ಯಾಹ್ನ 1.30ಕ್ಕೆ , ಸಂಜೆ 6 ಹಾಗೂ ರಾತ್ರಿ 9 ಗಂಟೆಗೆ ಪ್ರದರ್ಶನ ಕಾಣಲಿದೆ. ಮಾರ್ಚ್ ತಿಂಗಳ ಪ್ರತೀ ಭಾನುವಾರ ಮೂರು ಪ್ರದರ್ಶನಗಳಂತೆ ಪೆಪ್ಪೆರೆರೆ ಪೆರೆರೆರೆ ಒಟ್ಟು 12 ಪ್ರದರ್ಶನಗಳನ್ನು ಕಾಣಲಿದೆ. ಇದರೊಂದಿಗೆ ನಮ್ಮ ಕುಡ್ಲ ಟಾಕೀಸ್‍ನಲ್ಲಿ ಸಿನೆಮಾ ನೋಡಿ ಬಹುಮಾನ ಗೆಲ್ಲುವ ಅವಕಾಶ ಕೂಡಾ ಕಲ್ಪಿಸಲಾಗಿದೆ. ಮಾರ್ಚ್ 7ರಂದು ಮಧ್ಯಾಹ್ನ 1.30ಕ್ಕೆ ಪ್ರಸಾರವಾಗುವ ಪೆಪ್ಪೆರೆರೆ ಪೆರೆರೆರೆ ಚಿತ್ರವನ್ನು ನೋಡಿ, ಅಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲಬಹುದಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಕುಡ್ಲ ಟಾಕೀಸ್ ಒಂದು ವಿಶೇಷ ಪ್ರಯೋಗ. ಇದರಲ್ಲಿ ಹೊಸ ಸಿನಿಮಾಗಳನ್ನು ಪ್ರದರ್ಶಿಸುವುದು ಈಗಿನ ಚಿಂತನೆ. ಸೆನ್ಸಾರ್ ಆದ ತುಳು ಸಿನಿಮಾಗಳ ನಿರ್ಮಾಪಕರು ನಮ್ಮ ಕುಡ್ಲ ಟಾಕೀಸ್‍ನ ಪ್ರಮುಖರನ್ನು ಕಂಡು ಮಾತನಾಡಿ ಚಿತ್ರ ಪ್ರದರ್ಶನಕ್ಕೆ ಒಪ್ಪಿದರೆ ಮೊದಲು ನಮ್ಮ ಕುಡ್ಲ ಟಾಕೀಸ್‍ನ ತಂಡವೊಂದು ಸಿನಿಮಾವನ್ನು ವೀಕ್ಷಿಸಲಿದೆ. ತಂಡಕ್ಕೆ ಖುಷಿಯಾದರೆ ಮುಂದಿನ ಮಾತುಕತೆ. ಅದರ ಪ್ರಕಾರ ಒಂದು ತಿಂಗಳ ಕಾಲ ಈ ಸಿನಿಮಾವನ್ನು ಸಿನಿಮಾ ಮಂದಿರದಲ್ಲಿ ಬಿಡುಗಡೆ ಮಾಡುವಂತಿಲ್ಲ. ಪ್ರೀಮಿ ಯರ್ ಶೋಗೆ ಅವಕಾಶವಿದೆ. ಬಳಿಕ ಒಂದು ತಿಂಗಳ ಕಾಲ ಪ್ರತೀ ಭಾನುವಾರ ಮೂರು ಬಾರಿ ಈ ಸಿನಿಮಾವನ್ನು ನಮ್ಮ ಕುಡ್ಲ ಟಾಕೀಸ್ ಪ್ರದರ್ಶಿಸಲಿದೆ. ಇದಕ್ಕೆ ಪ್ರತಿಯಾಗಿ ಚಿತ್ರ ನಿರ್ಮಾಪಕರಿಗೆ ಯೋಗ್ಯ ಗೌರವಧನ ನೀಡಲಾಗುವುದು. ತದನಂತರ ನಿರ್ಮಾಪಕರು ಸಿನಿಮಾವನ್ನು ಟಾಕೀಸ್‍ಗಳಲ್ಲಿ ಬಿಡುಗಡೆ ಮಾಡಬಹುದು.
ಇದು ತುಳು ಸಿನಿಮಾ ನಿರ್ಮಾಪಕರಿಗೆ ಒಂದು ಉತ್ತೇಜನಕಾರಿ ಕ್ರಮವಾಗಲಿದೆ ಎಂದು ಭಾವಿಸಲಾಗಿದೆ. ಜತೆಗೆ ಪ್ರತಿ ಮನೆಯಲ್ಲೇ ಟೀವಿಯಲ್ಲೇ ಕುಟುಂಬ ಸಹಿತವಾಗಿ ಸಣ್ಣ ಮೊತ್ತಕ್ಕೆ ತುಳು ಸಿನಿಮಾ ವೀಕ್ಷಿಸಬಹುದು. ಕುಡ್ಲ ಟಾಕೀಸ್‍ನ ಪ್ರಕಾರ ಪ್ರದರ್ಶನಕ್ಕೆ ಆಯ್ಕೆಯಾಗುವ ಸಿನಿಮಾವನ್ನು ಕನಿಷ್ಠ 3ರಿಂದ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ. ಸಿನಿಮಾ ಉತ್ತಮವಾಗಿದ್ದರೆ ಆ ಬಳಿಕವೂ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಸ್ಪಂದನೆ ಉತ್ತಮವಾಗಿರಲಿದೆ. ಇದೊಂದು ಹೊಸ ಪ್ರಯತ್ನ. ಇದು ಸಫಲವಾದರೆ ತುಳು ಚಿತ್ರರಂಗ ಮತ್ತು ಚಿತ್ರಪ್ರೇಮಿಗಳಿಗೆ ಒಂದು ಸುವರ್ಣಾವಕಾಶವಾಗಲಿದೆ. ತುಳು ಸಿನಿಮಾರಂಗವು ಸೀಮಿತ ಮಾರುಕಟ್ಟೆ ಹೊಂದಿರುವ ಕಾರಣ ಅಲ್ಪಾವಧಿಯ ಅಂತರದಲ್ಲಿ ತುಳು ಸಿನಿಮಾಗಳು ಬಿಡುಗಡೆಗೊಳ್ಳು ವುದರಿಂದ ಚಿತ್ರ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ಆದ ಕಾರಣ ಕನಿಷ್ಟ ಒಂದು ತಿಂಗಳ ಅಂತರದಲ್ಲಿ ಹೊಸ ಚಿತ್ರ ಬಿಡುಗಡೆ ಮಾಡುವ ಯೋಜ ನೆಯನ್ನು ನಮ್ಮ ಕುಡ್ಲ ಟಾಕೀಸ್ ಹಾಕಿಕೊಂಡಿದೆ ಎಂದು ತಿಳಿಸಿದರು. ಈ ಸಂದರ್ಭ ಮಲ್ನಾಡ್ ಇನ್ಫೋಟೆಕ್ ಪ್ರೈ.ಲಿ ನ ಸಿಇಒ ಹರೀಶ್ ಬಿ. ಕರ್ಕೇರಾ, ನಮ್ಮ ಕುಡ್ಲ ಟಾಕೀಸ್ ನ ಸಿಒಒ ಕದ್ರಿ ನವನೀತ ಶೆಟ್ಟಿ, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ನವೀನ್ ಕೃಷ್ಣ ಭಂಡಾರಿ ಉಪಸ್ಥಿತರಿದ್ದರು.
| |