ಕರ್ನಾಟಕ ರಾಷ್ಟ್ರ ಸಮಿತಿ: ಲಂಚಮುಕ್ತ ಕರ್ನಾಟಕ ಅಭಿಯಾನ ನಾಳೆ ಉಡುಪಿಗೆ

ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಮಾ.6 ರಂದು “ಲಂಚಮುಕ್ತ ಕರ್ನಾಟಕ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರ ನೇತೃತ್ವದ ರಾಜ್ಯ ಸಮಿತಿಯ ತಂಡ ಮಾ.6 ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ  ಕಿರಣ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ಧಿ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಾ.6 ರಂದು ಲಂಚ ಮುಕ್ತ ಕರ್ನಾಟಕ ಅಭಿಯಾನದ ಸಲುವಾಗಿ ಅಂದು ಉಡುಪಿ ತಾಲ್ಲೂಕು ಕಚೇರಿ ಮತ್ತು ಸಬ್-ರಿಜಿಸ್ಯಾರ್ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿ “ಲಂಚಮುಕ್ತ ಕರ್ನಾಟಕ’ ಅಭಿಯಾನವನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಅತಿಯಾದ ಲಂಚ ಮತ್ತು ದುರಾಡಳಿತದ ಆರೋಪಗಳಿರುವ ಸರ್ಕಾರಿ ಕಚೇರಿಗಳಿಗೆ ಕೆಆರ್ ಎಸ್ ಪಕ್ಷದ ಪದಾಧಿಕಾರಿಗಳು ಭೇಟಿ ನೀಡಿ, ಅಲ್ಲಿಯ ವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ, ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಲಂಚಕೋರತನವೂ ಸೇರಿದಂತೆ ಅಲ್ಲಿರುವ ಲೋಪದೋಷಗಳನ್ನು ಪಟ್ಟಿ ಮಾಡಿ, ಅದನ್ನು ಕಚೇರಿಯ ಮುಖ್ಯಸ್ಥರಿಗೆ ನೀಡಿ, ಅಂದಿನಿಂದಲೇ ಅಲ್ಲಿ ಸುಗಮ ಮತ್ತು ಪಾರ ದರ್ಶಕ ಆಡಳಿತ ವ್ಯವಸ್ಥೆ ಅನುಷ್ಠಾನವಾಗಲು ಆಗ್ರಹಿಸುವ ಮತ್ತು ಕ್ರಮ ಜರುಗಿಸುವಂತೆ ಮಾಡುವ ಅಭಿಯಾನವೇ “ಲಂಚಮುಕ್ತ ಕರ್ನಾಟಕ” ಅಭಿಯಾನ ಎಂದರು.

ಉಡುಪಿ ತಾಲೂಕು  ಕಚೇರಿಯಲ್ಲಿ ತಾಲೂಕಿನ ಯಾವುದೇ ನಾಗರಿಕರಿಗೆ ತಮ್ಮ ಕಾನೂನುಬದ್ಧ ಕೆಲಸವನ್ನು ಮಾಡಿಕೊಡದೇ ಇಲ್ಲಿಯ ಅಧಿಕಾರಿಗಳು ಸತಾಯಿಸುತ್ತಿದ್ದರೆ ಅಥವಾ ಲಂಚ ಕೇಳುತ್ತಿದ್ದರೆ, ಮಾ.6 ರಂದು ಬೆಳಿಗ್ಗೆ 10.30ಕ್ಕೆ ತಾಲೂಕು ಕಚೇರಿ ಬಳಿಗೆ ಬಂದು ಅಲ್ಲಿ ಆ ಸಮಯಕ್ಕೆ ಹಾಜರಿರಲಿರುವ ಕೆಆರ್ ಎಸ್ ಪಕ್ಷದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು. ಹಾಗೂ ಅನಗತ್ಯ ಕಿರುಕುಳಗಳಿಂದ ಮತ್ತು ಅಧಿಕಾರಿಗಳ ಲಂಚಕೋರತನದಿಂದ ಸಂತ್ರಸ್ತರಾಗಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗಪಡೆದುಕೊಂಡು ಕರ್ನಾಟಕದಲ್ಲಿ ಭ್ರಷ್ಟಾಚಾರ-ರಹಿತ ಆಡಳಿತ ವ್ಯವಸ್ಥೆಯ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕೇಳಿಕೊಂಡರು.

ಇದೇ ವೇಳೆ ಹಾಗೆಯೇ, ಕೆಆರ್‍ಎಸ್ ಪಕ್ಷವು ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯಾದ್ಯಂತ ಸ್ಪರ್ಧಿಸಲಿದೆ. ಪಕ್ಷದ ಧೈಯ ಮತ್ತು ಸಿದ್ದಾಂತಗಳಲ್ಲಿ ವಿಶ್ವಾಸವಿರುವ ಹಾಗೂ ಈ ಚುನಾವಣೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಲು ಬಯಸುವವರು ಪಕ್ಷದ ಪದಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಇನ್ನು ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ (98444-75463) ಅಥವ ರಾಜ್ಯ ಯುವ ಘಟಕದ ಕಾರ್ಯದರ್ಶಿ ರಾಮದಾಸ್ ಪೈ (88619-12459) ಅವರನ್ನು  ಸಂಪರ್ಕಿಸಬೇಕೆಂದು ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!