ಲಕ್ನೋ: ಜೈಲಿನಲ್ಲಿ 20 ವರ್ಷ ಶಿಕ್ಷೆ ಅನುಭವಿಸಿದ ಬಳಿಕ ನಿರಪರಾಧಿ ತೀರ್ಪು!

ಲಕ್ನೋ: ಜೈಲಿನಲ್ಲಿ 20 ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಖೈದಿಯೊಬ್ಬನನ್ನು ನಿರಪರಾಧಿ ಎಂದು ಅಲಹಬಾದ್ ಹೈ ಕೋರ್ಟ್ ತೀರ್ಪು ಪ್ರಕಟಿಸಿದೆ.  ವಿಷ್ಣು ತಿವಾರಿ 20 ವರ್ಷ ಶಿಕ್ಷೆ ಅನುಭವಿಸಿದಾತ.

2000 ರಲ್ಲಿ ಲಲಿತ್‍ಪುರ ನಿವಾಸಿಯಾಗಿರುವ ವಿಷ್ಣು ತಿವಾರಿ ಮೇಲೆ, ತಮ್ಮ ಊರಿ ನಿಂದ 30 ಕಿ.ಮೀ. ದೂರದಲ್ಲಿರುವ ಸಿಲವನ್ ಗ್ರಾಮದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿತ್ತು. ಬಳಿಕ ತಿವಾರಿ ವಿರುದ್ಧ ಐಪಿಸಿಯ ಅತ್ಯಾಚಾರ, ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ಹಾಗೂ ಎಸ್‍ಸಿ, ಎಸ್‍ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ ವಿಚಾರಣಾ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ  ಕೂಡಾ ಪ್ರಕಟಿಸಿತ್ತು. ತದ  ನಂತರ 2003ರಲ್ಲಿ ತಿವಾರಿಯವರನ್ನು ಆಗ್ರಾ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ತಿವಾರಿ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಕುಟುಂಬಸ್ಥರು ನೀಡಿದ ದಾಖಲೆ ಆಧಿರಿಸಿ ಜೈಲಿನ ಅಧೀಕ್ಷಕರು ಬಣ್ಣಿಸಿದ್ದಾರೆ. ಇದರೊಂದಿಗೆ ತಿವಾರಿ ಖೈದಿಗಳಿಗೆ ಊಟ ತಯಾರಿಸುವುದು, ಜೈಲಿನಲ್ಲಿ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಿದ್ದರು.

 ಈ ನಡುವೆ 2005ರಲ್ಲಿ ಪ್ರಕರಣದ ತೀರ್ಪು ಪ್ರಶ್ನಿಸಿ ಅಲಹಬಾದ್ ಹೈ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು. ಆದರೆ ಆಗ ಅವರ ತಂದೆ ಸಾವನ್ನಪ್ಪಿದ್ದರಿಂದ ಮತ್ತೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಬಳಿಕ ಜೈಲು ಅಧಿಕಾರಿಗಳೇ ಸ್ಟೇಟ್ ಲೀಗಲ್ ಸರ್ವಿಸ್ ಅಥಾರಿಟಿಯನ್ನು ಸಂಪರ್ಕಿಸಿ, 2020ರಲ್ಲಿ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಜನವರಿಯಲ್ಲಿ ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಠಾಕರ್ ಹಾಗೂ ಗೌತಮ್ ಚೌಧರಿ ಅವರಿದ್ದ ಪೀಠ ತಿವಾರಿಯವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
   
3 ದಿನ ತಡವಾಗಿ ಎಫ್ ಐಆರ್ ದಾಖಲಿಸಲಾಗಿದೆ. ಅಲ್ಲದೆ ಸಂತ್ರಸ್ತೆ ಖಾಸಗಿ ಅಂಗದಲ್ಲಿ ಯಾವುದೇ ರೀತಿಯ ಗಾಯಗಳಾಗಿಲ್ಲ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಈ ರೀತಿ ದೂರು ನೀಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
   
ಪ್ರಕರಣಕ್ಕೆ ಸಂಬಂಧಿಸಿ ನಕಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿ 20 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದು, ಇದೀಗ ತನ್ನೆಲ್ಲ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ. ಸದ್ಯದಲ್ಲೇ ವ್ಯಕ್ತಿ ಬಿಡುಗಡೆಯಾಗುತ್ತಿದ್ದು, ಆದರೆ ಮಾಡದ ಅಪರಾಧಕ್ಕೆ ಬರೋಬ್ಬರಿ 20 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ಅಧೀಕೃತ ಬಿಡುಗಡೆ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಆಗ್ರಾ ಸೆಂಟ್ರಲ್ ಜೈಲಿನ ಹಿರಿಯ ಅಧಿಕಾರಿ ವಿ.ಕೆ.ಸಿಂಗ್ ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!