ಲಸಿಕೆಯಿಂದ ದೇಶದಲ್ಲಿ ಯಾವುದೇ ಸಾವು ಸಂಭವಿಸಿಲ್ಲ: ಕೇಂದ್ರ ಸಚಿವ ಹರ್ಷವರ್ಧನ್

ನವದೆಹಲಿ: ದೇಶದಲ್ಲಿ ಈವರೆಗೆ ಕೊರೋನಾ ಲಸಿಕೆಯಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಸೋಮವಾರ ಹೇಳಿದ್ದಾರೆ.

ಕೋವಿಡ್ -19 ಲಸಿಕೆಗಳ ಅಡ್ಡಪರಿಣಾಮಗಳ ಕುರಿತು ಎಎನ್‌ಐ ಜತ ಮಾತನಾಡಿದ ಕೇಂದ್ರ ಸಚಿವರು, “ಅಡ್ಡಪರಿಣಾಮಗಳು ಊತ ಅಥವಾ ಜ್ವರದಂತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಇದು ಕೆಲವೊಮ್ಮೆ ಸಾಮಾನ್ಯ ವ್ಯಾಕ್ಸಿನೇಷನ್ ಸಮಯದಲ್ಲೂ ಈ ರೀತಿಯ ಅಡ್ಡ ಪರಿಣಾಮಗಳು ಆಗುತ್ತವೆ. ವ್ಯಾಕ್ಸಿನೇಷನ್ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವುದು ಕೇವಲ 0.0004 ರಷ್ಟು. ಇದರಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

“ಲಸಿಕೆ ಪಡೆದ 4 ಅಥವಾ 10 ದಿನಗಳ ನಂತರ ಯಾರಾದರೂ ಮೃತಪಟ್ಟರೆ, ನೀವು ಅದನ್ನು ವ್ಯಾಕ್ಸಿನೇಷನ್‌ಗೆ ಲಿಂಕ್ ಮಾಡಲು ಸಾಧ್ಯವಿಲ್ಲ. ಪ್ರತಿ ಸಾವನ್ನು ವೈಜ್ಞಾನಿಕವಾಗಿ ತನಿಖೆ ಮಾಡಲಾಗಿದೆ. ಉನ್ನತ ಮಟ್ಟದ ತಜ್ಞರ ಸಮಿತಿಯು ಇದನ್ನು ಮೌಲ್ಯಮಾಪನ ಮಾಡುತ್ತಿದೆ, ಲಸಿಕೆಯ ಕಾರಣದಿಂದ ಯಾವುದೇ ಸಾವು ವರದಿಯಾಗಿಲ್ಲ” ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಒಂದು ಕೋಟಿಗೂ ಹೆಚ್ಚು ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ ಮತ್ತು 20ಕ್ಕೂ ಹೆಚ್ಚು ದೇಶಗಳು ನಮ್ಮ ಲಸಿಕೆಗಳನ್ನು ಬಳಸುತ್ತಿವೆ. ಹೀಗಾಗಿ ಲಸಿಕೆಗಳನ್ನು ಪ್ರಶ್ನಿಸುವುದು ರಾಜಕೀಯ ಪ್ರೇರಿತ ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!