ಬಿಪಿಸಿಎಲ್‌’ನ ಅಸ್ಸಾಂ ತೈಲ ಸಂಸ್ಕರಣಾ ಘಟಕ ರೂ.9,876 ಕೋಟಿಗೆ ಮಾರಾಟ

ನವದೆಹಲಿ: ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಅಸ್ಸಾಂನ ನುಮಾಲಿಗಡ ಸಂಸ್ಕರಣಾ ಘಟಕದ ಪೂರ್ಣ ಪಾಲುದಾರಿಕೆಯನ್ನು ಆಯಿಲ್‌ ಇಂಡಿಯಾ ಲಿಮಿಟೆಡ್‌ ಮತ್ತು ಎಂಜಿನಿಯರ್ಸ್‌ ಇಂಡಿಯಾ ಲಿಮಿಟೆಡ್‌ಗೆ ₹9,876 ಕೋಟಿಗೆ ಮಾರಾಟ ಮಾಡುತ್ತಿದೆ.

ದೇಶದ ಎರಡನೇ ಅತಿ ದೊಡ್ಡ ಇಂಧನ ರಿಟೇಲ್‌ ಸಂಸ್ಥೆಯಾಗಿರುವ ಬಿಪಿಸಿಎಲ್‌, ನುಮಾಲಿಗಡ ಘಟಕದ ಮಾರಾಟದಿಂದ ಖಾಸಗೀಕರಣದ ಹಾದಿಯನ್ನು ಸ್ಪಷ್ಟಪಡಿಸಿಕೊಂಡಿದೆ.

ನುಮಾಲಿಗಡ ರಿಫೈನರಿ ಲಿಮಿಟೆಡ್‌ನ್ನು (ಎನ್‌ಆರ್‌ಎಲ್‌) ಸರ್ಕಾರವು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದರ ಭಾಗವಾಗಿ ಬಿಪಿಸಿಎಲ್‌ ತನ್ನ ಎಲ್ಲ ಶೇ 61.65ರಷ್ಟು ಪಾಲುದಾರಿಕೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಆಯಿಲ್‌ ಇಂಡಿಯಾ ಲಿಮಿಟೆಡ್‌, ಎಂಜಿನಿಯರ್ಸ್‌ ಇಂಡಿಯಾ ಲಿಮಿಟೆಡ್‌ ಹಾಗೂ ಅಸ್ಸಾಂ ಸರ್ಕಾರ ಪಾಲುದಾರಿಕೆ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದು, ಬಿಪಿಸಿಎಲ್‌ ಮಂಡಳಿಯು ಸೋಮವಾರ ಮಾರಾಟಕ್ಕೆ ಸಮ್ಮತಿಸಿದೆ.

ಎನ್‌ಆರ್‌ಎಲ್‌ನಲ್ಲಿ ಸಂಪೂರ್ಣ 445.35 ಕೋಟಿ ಷೇರುಗಳನ್ನು ₹9,875.96 ಕೋಟಿಗೆ ಬಿಪಿಸಿಎಲ್‌ ಮಾರಾಟ ಮಾಡಲಿದೆ. ಇದರಲ್ಲಿ ಶೇ 13.65ರಷ್ಟು ಷೇರುಗಳನ್ನು ಅಸ್ಸಾಂ ಸರ್ಕಾರ ಪಡೆದುಕೊಳ್ಳಲಿದೆ. ಸದ್ಯ ಎನ್‌ಆರ್‌ಎಲ್‌ನಲ್ಲಿ ಅಸ್ಸಾಂ ಸರ್ಕಾರದ ಪಾಲು ಶೇ 12.35ರಷ್ಟಿದೆ.

ವಾರ್ಷಿಕ 30 ಲಕ್ಷ ಟನ್‌ ತೈಲ ಸಂಸ್ಕರಣೆ ಕಾರ್ಯವನ್ನು ಅಸ್ಸಾಂನ ಎನ್‌ಆರ್‌ಎಲ್‌ ನಡೆಸುತ್ತಿದೆ. ಬಿಪಿಸಿಎಲ್‌ ಮುಂಬೈ, ಕೊಚ್ಚಿ (ಕೇರಳ) ಹಾಗೂ ಬಿನಾದಲ್ಲಿ (ಮಧ್ಯ ಪ್ರದೇಶ) ತೈಲ ಸಂಸ್ಕರಣಾ ಘಟಕಗಳನ್ನು ಹೊಂದಿದೆ.

ಸರ್ಕಾರವು ಬಿಪಿಸಿಎಲ್‌ನಲ್ಲಿ ಶೇ 52.98ರಷ್ಟು ಪಾಲುದಾರಿಕೆಯನ್ನು ಮಾರಾಟದ ಮೂಲಕ ಖಾಸಗೀಕರಣಗೊಳಿಸಲು ಮುಂದಾಗಿದೆ. 2021–22ರಲ್ಲಿ ಪಾಲು ಮಾರಾಟದಿಂದ ಸರ್ಕಾರವು ₹1.75 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ಎನ್‌ಆರ್‌ಎಲ್‌ ಮಾರಾಟ ಮೊದಲ ಹೆಜ್ಜೆಯಾಗಿದೆ.

ವೇದಾಂತ ಗ್ರೂಪ್‌, ಅಪೋಲೊ ಗ್ಲೋಬಲ್‌ ಹಾಗೂ ಥಿಂಕ್‌ ಗ್ಯಾಸ್‌ ಬಿಪಿಸಿಎಲ್‌ನಲ್ಲಿ ಸರ್ಕಾರದ ಪಾಲುದಾರಿಕೆಯನ್ನು ಖರೀದಿಸಲು ಆಸಕ್ತಿ ತೋರಿಸಿವೆ.

Leave a Reply

Your email address will not be published. Required fields are marked *

error: Content is protected !!