| ಮಂಗಳೂರು: ಲಂಚಕ್ಕಾಗಿ ಪೀಡಿಸುತ್ತಿದ್ದ ಆರೋಪದಲ್ಲಿ ಮಂಗಳೂರು ನಗರ ಸರ್ವೇಯರ್ ನ್ನು ಮಂಗಳೂರು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಗಂಗಾಧರ್ ಬಂಧಿತ ಮಂಗಳೂರು ನಗರ ಸರ್ವೇಯರ್.
ಈತ ಮಂಗಳೂರು ನಗರದಲ್ಲಿ ಉದ್ಯಮಿಯೋರ್ವರು ತಮ್ಮ ಕಚೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಗಾಗಿ ಕೋರಿಕೆ ಪತ್ರ ಸಲ್ಲಿಸಿದ್ದರು. ಈ ಪತ್ರವನ್ನು ಮಂಗಳೂರು ನಗರದ ಅರಣ್ಯ ಇಲಾಖೆಯವರು ಕಂದಾಯ ಇಲಾಖೆಗೆ ಕಳುಹಿಸಿದ್ದರು.
ಆದರೆ, ಅನುಮತಿ ಪತ್ರ ಸಲ್ಲಿಸಿ ಒಂದು ತಿಂಗಳು ಕಳೆದರೂ ಸ್ಥಳ ಪರಿಶೀಲನೆ ನಡೆಸಲು ಸರ್ವೇಯರ್ ಗಂಗಾಧರ್ ಸ್ಥಳಕ್ಕೆ ಬಂದಿರುವುದಿಲ್ಲ. ಈ ಬಗ್ಗೆ ಕೇಳಿದಾಗ ಸ್ಥಳ ಪರಿಶೀಲನೆ ನಡೆಸಲು ಗಂಗಾಧರ್ 3,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ನಡುವೆ ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂ. ಜೊತೆಯಲ್ಲಿ ಇವರಿಗೆ 3,000 ರೂ. ನೀಡಲಾಗಿತ್ತು. ಆದರೆ ಮತ್ತೆ ತಿಂಗಳು ಕಳೆದರೂ ಈ ಬಗ್ಗೆ ಕಾರ್ಯ ಪ್ರವೃತ್ತರಾಗದ ಗಂಗಾಧರ್ ಮರ ಇರುವ ಸ್ಥಳದ ನಕಾಶೆ ನೀಡಲು ಉದ್ಯಮಿಗೆ ಮತ್ತೆ 30,000 ರೂ. ಡಿಮಾಂಡ್ ಇರಿಸಿದ್ದರು ಎನ್ನಲಾಗಿದೆ.
ಈ ವಿಷಯವನ್ನು ಉದ್ಯಮಿ ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರಿಗೆ ತಿಳಿಸಿದ್ದಾರೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ, ಮಂಗಳೂರು ಎಸಿಬಿ ಅಧಿಕಾರಿಗಳು ಗಂಗಾಧರ ನನ್ನು ಮಂಗಳೂರಿನ ಮಿನಿ ವಿಧಾನಸೌಧದ ಎದುರು 20 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ . | |