ಮಂಗಳೂರು: 3 ಇಂದಿರಾ ಕ್ಯಾಂಟೀನ್ ಬಂದ್

ಮಂಗಳೂರು: ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪೂರೈಕೆ ಮಾಡುವುದು ಹಾಗೂ ಹಸಿವಿನಿಂದ ಯಾರೂ ಇರಬಾರದು ಎಂಬ ಕಾರಣಕ್ಕಾಗಿ ರಾಜ್ಯಾದ್ಯಂತ 2017ರ ಅಗಸ್ಟ್ 15 ರ0ದು ಇಂದಿರಾ ಕ್ಯಾಂಟೀನ್‍ನ್ನು ಆರಂಭಿಸಲಾಗಿತ್ತು. ಒಂದು ಕ್ಯಾಂಟೀನ್‍ನಲ್ಲಿ ದಿನವೊಂದಕ್ಕೆ ಸುಮಾರು 500ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ಉಪಹಾರ ಪೂರೈಕೆ ಮಾಡುತ್ತಿದ್ದ ಇಂದಿರಾ ಕ್ಯಾಂಟೀನ್ ಈಗ ಮುಚ್ಚುವ ಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಇಂದಿರಾ ಕ್ಯಾಂಟೀನ್‍ನಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಕಳೆದ ಕೆಲವು ತಿಂಗಳಿನಿಂದ ವೇತನ ಇಲ್ಲದಾಗಿದೆ.

ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ, ಇಲ್ಲಿ ಕೆಲವು ಕಡೆಗಳಲ್ಲಿ ಇಂದೀರಾ ಕ್ಯಾಂಟೀನ್‍ನಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಆದಾಯ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 3 ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಲಾಗಿದೆ. ಜಿಲ್ಲೆಯ ಪುತ್ತೂರು, ಸುಳ್ಯ ಮತ್ತು ಬಂಟ್ವಾಳದ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲಾಗಿದ್ದು, ಈ ಕ್ಯಾಂಟೀನ್ ಗಳಲ್ಲಿ ತಲಾ ಏಳರಂತೆ ಸುಮಾರು 21 ಮಂದಿ ಕೆಲಸ ಮಾಡುತ್ತಿದ್ದು, ಇಲ್ಲಿ ಕೆಲಸ ಮಾಡುವವರಿಗೆ ಅಕ್ಟೋಬರ್ ನಂತರ ಸಂಬಳ ಸಿಕ್ಕಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಸಂಬಳಕ್ಕಾಗಿ ಬೇಸತ್ತು, 3 ಮೂರು ದಿನಗಳಿಂದ ಕ್ಯಾಂಟೀನ್ ಗಳನ್ನೇ ಮುಚ್ಚಿ ಮನೆಯಲ್ಲಿ ಕೂತಿದ್ದಾರೆ.

 ಈ ಬಗ್ಗೆ ಮಾಹಿತಿ ನೀಡಿರುವ ಇಂದಿರಾ ಕ್ಯಾಂಟೀನ್ ನಿರ್ವಹಿಸುತ್ತಿರುವ ಸಂಸ್ಥೆ ಭಾರತೀಯ ಮಾನವ ಕಲ್ಯಾಣ ಪರಿಷದ್ ಆಡಳಿತ ವಿಭಾಗದ ಶಶಿಕುಮಾರ್ ಅವರು, ರಾಜ್ಯದ ಇತರೆಡೆ 85 ಕ್ಯಾಂಟೀನ್ ನಡೆಸುತ್ತಿದ್ದೇವೆ. ಸಿಬ್ಬಂದಿ ವೇತನಕ್ಕಾಗಿಯೇ ತಿಂಗಳಿಗೆ 95 ಲಕ್ಷ ಖರ್ಚು ಇದ್ದು, ಆಹಾರ ಸಾಮಾಗ್ರಿ ಖರೀದಿಯ ಖರ್ಚು ಬೇರೆಯೇ ಇದೆ. 25 ಕೋಟಿ ರೂಪಾಯಿ ನಮಗೆ ಸರಕಾರದಿಂದ ಬರಲು ಬಾಕಿ ಇದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ ಕಳೆದ ಮಾರ್ಚ್ ನಿಂದ ಹಣ ನೀಡಿಲ್ಲ ಎಂದು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!