ಮಂಗಳೂರು: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನದ ಅಂಗವಾಗಿ ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿ ಪೊಲೀಸರು ಸಂಘಟನೆಯ ನಾಯಕರ ಮೇಲೆ ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿರುವುದು ಬಿಜೆಪಿ ಸರಕಾರದ ದ್ವೇಷ ರಾಜಕೀಯದ ಮುಂದುವರಿದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಘಪರಿವಾರದ ಮುಖಂಡರು ಕೋಮು ಪ್ರಚೋದನಾಕಾರಿ ಭಾಷಣ ನಡೆಸಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಉಳ್ಳಾಲವನ್ನು ಪಾಕಿಸ್ತಾನ ಎಂದು ಕರೆದು ಅವಹೇಳನ ಮಾಡಿರುವುದು ಇದಕ್ಕೆ ತಾಜಾ ನಿದರ್ಶನವಾಗಿದೆ. ಶರಣ್ ಪಂಪ್ಟೆಲ್, ಪ್ರಮೋದ್ ಮುತಾಲಿಕ್ ನಂತವರು ಮುಸ್ಲಿಮ್ ಸಮಾಜವನ್ನು ನಿಂದಿಸಿ ದ್ವೇಷ, ಶತ್ರುತ್ವ ಹರಡುವ ಹೇಳಿಕೆಗಳನ್ನು ನೀಡಿ ಜಿಲ್ಲೆಯ ಶಾಂತಿ ಕದಡಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಸಂಸದ ನಳಿನ್ ಕುಮಾರ್ ಇಡೀ ಜಿಲ್ಲೆಗೆ ಬೆಂಕಿ ಹಚ್ಚುವ ಬಹಿರಂಗ ಬೆದರಿಕೆ ನೀಡಿದ್ದರು. ಇತ್ತೀಚಿಗೆ ತೊಕ್ಕೋಟ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಪರಿವಾರದ ನಾಯಕರು ನೀಡಿದ ಉದ್ರೇಕಕಾರಿ ಭಾಷಣದ ಕುರಿತು ದಾಖಲೆ ಸಹಿತ ದೂರು ನೀಡಿದ್ದರೂ ಇನ್ನೂ ಎಫ್.ಐ.ಆರ್ ದಾಖಲಿಸಿಲ್ಲ.
ತಮ್ಮ ಸಮ್ಮುಖದಲ್ಲೇ ಇಂತಹ ಪ್ರಚೋದನಾಕಾರಿ ಭಾಷಣಗಳನ್ನು ನಡೆಸಿದ್ದರೂ ಪೊಲೀಸರು ಸ್ವಯಂ ಪ್ರೇರಿತವಾಗಿಯೂ ಕೇಸು ದಾಖಲಿಸಿಲ್ಲ, ಬಿಜೆಪಿ ಸಂಘಪರಿವಾರದ ನಾಯಕರ ದ್ವೇಷ ಹರಡುವ ಭಾಷಣಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು, ಬಿಜೆಪಿ ಸರಕಾರದ ಆಣತಿಯಂತೆ ಇದೀಗ ಶಿಸ್ತುಬದ್ಧವಾಗಿ ಹಾಗೂ ಕಾನೂನಾತ್ಮಕವಾಗಿ ಕಾರ್ಯಕ್ರಮ ನಡೆಸಿದ ಪಾಪ್ಯುಲರ್ ಫ್ರಂಟ್ ನಾಯಕರ ಮೇಲೆ ವಿನಾ ಕಾರಣ ಪ್ರಕರಣ ದಾಖಲಿಸಿದ್ದಾರೆ ಎಂದರು.
ಈ ಕುರಿತು ಮಾತು ಮುಂದುವರೆಸಿದ ಅವರು, ಇತರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ, ಪಾಪ್ಯುಲರ್ ಫ್ರಂಟ್ ನ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ರಾಜಕೀಯ ಒತ್ತಡ ಹೇರುವುದು, ಅನುಮತಿ ನಿರಾಕರಿಸುವುದು, ಅನಗತ್ಯ ಷರತ್ತುಗಳನ್ನು ವಿಧಿಸಿ ಕೊನೆ ಗಳಿಗೆಯಲ್ಲಿ ಅನುಮತಿ ನೀಡುವ ಬೆಳವಣಿಗೆ ಪ್ರಾರಂಭದಿಂದಲೂ ನಡೆಯುತ್ತಾ ಬಂದಿದೆ. ಇದು ಸಂವಿಧಾನ ಕಲ್ಪಿಸಿರುವ ಜನರನ್ನು ಸಂಘಟಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ಯದ ಮೇಲಿನ ದಾಳಿಯೂ ಆಗಿದೆ. ಪಾಪ್ಪಲರ್ ಫ್ರಂಟ್ ನಾಯಕರ ಮೇಲೆ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಿರುವುದು ಪೊಲೀಸರ ತಾರತಮ್ಯ ಮತ್ತು ಪಕ್ಷಪಾತ ಧೋರಣೆಯನ್ನು ಬಹಿರಂಗಪಡಿಸುತ್ತದೆ. ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿಯದೆ ಪೊಲೀಸರು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
| | |