ಯಡಿಯೂರಪ್ಪರಷ್ಟು ಭ್ರಷ್ಟ,ಲಂಚಕೋರ ರಾಜ್ಯದ ಇತಿಹಾಸದಲ್ಲಿ ಯಾರು ಇಲ್ಲ: ಸಿದ್ದರಾಮಯ್ಯ

ಉಡುಪಿ: ಮುಖ್ಯಮಂತ್ರಿ ಯಡಿಯೂರಪ್ಪರಷ್ಟು ಭ್ರಷ್ಟ, ಲಂಚಕೋರ ಕರ್ನಾಟಕದ ಇತಿಹಾಸದಲ್ಲೇ ಯಾರು ಇಲ್ಲ . ಈ ಹಿಂದೆ ಮುಖ್ಯ ಮಂತ್ರಿ ಯಡಿಯೂರಪ್ಪ ಚೆಕ್ ಮೂಲಕ ಲಂಚ‌ ತೆಗೆದುಕೊಂಡರೆ ಈಗ ಮಗ ವಿಜಯೇಂದ್ರ ಆರ್ಟಿಜಿಎಸ್ ಮೂಲಕ ಲಂಚದ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಕೈಗೊಂಡಿರುವ “ಜನಧ್ವನಿ” ಪಾದಯಾತ್ರೆಯ ಮೊದಲ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ‘ನಾ ಕಾವುಂಗಾ ನಾ ಕಾನೆ ದೂಂಗ’ ಎಂದು ಹೇಳುತ್ತಾರೆ. ಆದರೆ ಎಲ್ಲಿ ನರೇಂದ್ರ ಮೋದಿಯವರೆ ನೀವು  ಹೇಳುವುದಕ್ಕೂ ನಡೆದು ಕೊಳ್ಳುವುದಕ್ಕೂ ಏನಾದರೂ ಸಂಬಂಧ ಇದೆಯಾ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದ ಬಜೆಟ್ 2,37,000 ಕೋಟಿ, ಕೋವಿಡ್ ಸಂಬಂದ ಸರಕಾರ 6,000 ಕೋಟಿ ಖರ್ಚು ಮಾಡಿದ್ದಾರೆ. ಇದರರಲ್ಲೂ ಕೂಡ 50 ಶೇ.ದಷ್ಟು ನುಂಗಿದ್ದಾರೆ. ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಇಂದು ದೇಶದ ಉತ್ಪಾದನಾ ವಲಯ ನಿಷ್ಕ್ರಿಯಗೊಂಡಿದೆ.  ಇಂತಹ ಕೆಟ್ಟ ಸರಕಾರ ಎಂದಾದರು ಬಂದಿತ್ತಾ ಎಂದು ಕೇಳಿದ ಅವರು,  ಸರಕಾರದ ಬಳಿ  ಅಭಿವೃದ್ಧಿ ಕೆಲಸಕ್ಕೆ ಕೇಳಿದ್ರೆ ದುಡ್ಡಿಲ್ಲ, ರಸ್ತೆ ಕೆಲಸಕ್ಕೆ ದುಡ್ಡಿಲ್ಲ, ಮನೆಗಳಿಗೆ ದುಡ್ಡು ಕೊಡಿ ಎಂದರೆ ದುಡ್ಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

 ಹೆಡ್ಗೇವಾರ್, ಗೊಲ್ವಾಲ್ಕರ್ ಇವರೆಲ್ಲ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದದ್ದು ಯಾಕೆ ? ಎಂದು ಪ್ರಶ್ನಿಸಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರು ಇವತ್ತು ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ ಸ್ವಾಮಿ ಎಂದು ಕೇಳಿದ್ದಾರೆ.

 ದೇಶಪ್ರೇಮದ ಪಾಠ ಮಾಡುವ ಬಿಜೆಪಿ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ತ್ಯಾಗ, ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರೆಸ್ಸೆಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ ಎಂದ ಅವರು, ಮಹಾತ್ಮ ಗಾಂಧಿಯವರಂತೆ ನಾನು ರಾಮ ಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧಿಯವರ ಆದರ್ಶ. ಗಾಂಧಿಯವರನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವೇ ಇಲ್ಲ. ರಾಮಭಕ್ತರೆಂದರೆ ಕಾಯುವವರೋ ? ಕೊಲ್ಲುವವರೋ ? ಎಂದು ಕೇಳಿದ್ದಾರೆ.

ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತತೆ. ಆದರೆ ಧರ್ಮದ ಹೆಸರಿನಲ್ಲಿ ಸಮಾಜ ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು. ಒಂದು ಕಾಲದಲ್ಲಿ ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ ನಾಯಕರು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನ ಜನ ಪರಸ್ಪರ ಅಪನಂಬಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಆರೆಸ್ಸೆಸ್ ಮತ್ತು ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ.

ಈ ಸಂದರ್ಭ  ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಶಾಸಕ ಯುಟಿ ಖಾದರ್, ಮಾಜಿ ಶಾಸಕ ಮೊಯಿದ್ದೀನ್ ಬಾವ, ಅಭಯ್ ಚಂದ್ರ ಜೈನ್, ರಮಾನಾಥ ರೈ, ಗೋಪಾಲ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಪುಷ್ಪ ಅಮರ್ ನಾಥ್,  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ಎಂ.ಎ ಗಫೂರ್, ಮಿಥುನ್ ರೈ , ವೆರೋನಿಕಾ ಕರ್ನೆಲಿಯೋ, ಮಲ್ಯಾಡಿ ಶಿವರಾಮ ಶೆಟ್ಟಿ, ಯುಸಿ ಶೆಖಬ್ಬ, ಎಂಪಿ ಮೊಯಿದಿನಬ್ಬ, ಹರೀಶ್ ಕಿಣಿ   ಮೊದಲಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!