ಸೋಂಕಿತರ ಸಂಖ್ಯೆ ಹೆಚ್ಚಳ- ತಲಪಾಡಿ ಚೇಕ್ ಪೋಸ್ಟ್ ನಲ್ಲಿ ಪ್ರತಿಭಟನೆ
ಉಳ್ಳಾಲ: ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಗಳ ಗಡಿಭಾಗ ತಲಪಾಡಿಯಲ್ಲಿ ಚೇಕ್ ಪೋಸ್ಟ್ ಅಳವಡಿಸಲಾಗಿದೆ. ಕೇರಳದಿಂದ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ತಡೆದ ಗಡಿನಾಡ ಕನ್ನಡಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನಾಕಾರರು ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆಯಲ್ಲಿ ಮಲಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಈ ನಡುವೆ ರಾ.ಹೆ ತಡೆಯದಂತೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಸ್. ಮುಂದಾದರೂ, ಪ್ರತಿಭಟನಾಕಾರರು ‘ ಕರ್ನಾಟಕ ಪೊಲೀಸ್ ಗೋ ಬ್ಯಾಕ್ ‘ ಎಂದು ಕೂಗಿ ವಾಪಸ್ಸು ಕಳುಹಿಸಿದ್ದಾರೆ. ಬಳಿಕ ಒಂದು ಗಂಟೆಯವರೆಗೂ ಮುಂದುವರಿದ ಪ್ರತಿಭಟನಾ ಸ್ಥಳಕ್ಕೆ ಭೇಡಿ ನೀಡಿದ ಮಂಜೇಶ್ವರ ಸಿ.ಐ ಅರುಣ್ ದಾಸ್ ಅವರು, ಕಾಸರಗೋಡು ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸುವ ಭರವಸೆ ನೀಡಿದರು. ಇದೇ ವೇಳೆ ನಾಳೆ ಮತ್ತೆ ಕರ್ನಾಟಕದವರಿಂದ ತೊಂದರೆಯಾದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಇಂದು ಬೆಳಿಗ್ಗೆ 7 ಗಂಟೆಯಿಂದ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ಬಾಯರಿ, ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದ ತಂಡ ತಲಪಾಡಿ ಗಡಿಭಾಗದಲ್ಲಿ ನಿಂತು ಕೇರಳದಿಂದ ಬರುವವರನ್ನು ತಡೆದು ಆರ್ ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ನೀಡುವಂತೆ ಸೂಚಿಸಿದರು. ಬರುವವರ ಪೈಕಿ ಯಾರಲ್ಲಿಯೂ ರಿಪೋರ್ಟ್ ಇಲ್ಲದೇ ಇದ್ದು, ನಾಳೆಯಿಂದ ಕಡ್ಡಾಯವಾಗಿ ಆರ್ ಟಿ ಪಿಸಿಆರ್ ವರದಿ ತರುವಂತೆ ಸೂಚಿಸಿದರು. ನಾಳೆಯಿಂದ ವರದಿ ಇಲ್ಲದೇ ಇದ್ದಲ್ಲಿ ಮಂಗಳೂರು ಪ್ರವೇಶ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಪ್ರಭಟನೆ ಆರಂಭಗೊಂಡಿದೆ.