ಸರ್ಕಾರಿ ನೌಕರರು ಎಲೆಕ್ಟ್ರಿಕ್ ವಾಹನ ಬಳಕೆ ಕಡ್ಡಾಯ: ಕೇಂದ್ರ ಚಿಂತನೆ!

ನವದೆಹಲಿ: ಸರ್ಕಾರಿ ನೌಕರರು ಇನ್ನು ಮುಂದೆ ಎಲೆಕ್ಟ್ರಿಕ್ ವಾಹನ ಬಳಕೆ ಮಾಡುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದೇಶದಲ್ಲಿ ತೈಲೋತ್ಪನ್ನಗಳ ದರಗಳು ನಿತ್ಯ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ದೆಹಲಿಯಲ್ಲಿರುವ ಎಲ್ಲ ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಬಳಕೆ ಕಡ್ಡಾಯ ಮಾಡಲಾಗುವುದು ಎಂದು  ಹೇಳಿದ್ದಾರೆ.

ಲಾಂಚ್ ಗೋ ಎಲೆಕ್ಟ್ರಿಕ್ ಅಭಿಯಾನದಲ್ಲಿ ಮಾತನಾಡಿದ ಸಚಿವ ಗಡ್ಕರಿ, ತೈಲೋತ್ಪನ್ನಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆ್ಚ್ಚಾಗಬೇಕು. ಈ ಅಭಿಯಾನವನ್ನು ತಮ್ಮ ಇಲಾಖೆಯಿಂದಲೇ ಆರಂಭಿಸುವುದಾಗಿ ಹೇಳಿದ ಅವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವುದಾಗಿ ಘೋಷಣೆ ಮಾಡಿದ್ದಾರೆ. ಅಂತೆಯೇ  ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರಿಗೆ ಸಲಹೆ ನೀಡಿದ ನಿತಿನ್ ಗಡ್ಕರಿ, ತಮ್ಮ ಇಲಾಖೆಗಳ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿದ್ದಾರೆ.

ಇದೇ ವೇಳೆ, ‘ಭಾರತದ ತೈಲ ಆಮದು ಅವಲಂಬನೆ ಕಡಿತಗೊಳಿಸುವ ಪ್ರಯತ್ನದಲ್ಲಿ ಇತರ ಇಲಾಖೆಗಳು ಕೂಡ ಸರ್ಕಾರಿ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವಂತೆ ಅವರು ಸಲಹೆ ನೀಡಿದರು. ಒಂದು ಲೆಕ್ಕಾಚಾರದ ಪ್ರಕಾರ, ದೆಹಲಿಯಲ್ಲಿ 10,000 ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಸುಮಾರು 30 ಕೋಟಿ ರೂಪಾಯಿಯಷ್ಟು ಉಳಿತಾಯವಾಗಬಹುದು. ಎಲೆಕ್ಟ್ರಿಕ್ ಅಡುಗೆ ಉಪಕರಣಗಳನ್ನು ಬಳಸುವುದರಿಂದ ಆಮದು ಮಾಡಿದ ಅಡುಗೆ ಅನಿಲ ದರಕ್ಕಿಂತ ಕಡಿಮೆ ಖರ್ಚಿನಲ್ಲಿ ಅಡುಗೆ ಮಾಡಬಹುದು ಎಂದು ಹೇಳಿದರು.

ಅಡುಗೆ ಅನಿಲ ದರ ಭಾರಿ ದುಬಾರಿಯಾಗಿದೆ. ಅಡುಗೆಗಾಗಿ ಆಮದು ಮಾಡಿದ ದುಬಾರಿ ಅನಿಲ ಖರೀದಿಸುವ ಬದಲು ವಿದ್ಯುತ್ ಒಲೆ ಉಪಕರಣಗಳನ್ನು ಖರೀದಿಸಲು ಸಹಾಯಧನ ನೀಡುವಂತೆ ಸಚಿವರು ಸಲಹೆ ನೀಡಿದರು. ಅಂತೆಯೇ  ನಾವು ವಿದ್ಯುತ್ ಉಪಕರಣಗಳಿಗೆ ಏಕೆ ಸಬ್ಸಿಡಿ ಕೊಡಬಾರದು? ಅಡುಗೆ ಅನಿಲ ಸಬ್ಸಿಡಿ ನೀಡುತ್ತಿರುವ ಮಾದರಿಯಲ್ಲಿ ವಿದ್ಯುತ್ ಉಪಕರಣಗಳಿಗೆ ಸಬ್ಸಿಡಿ ನೀಡಬಹುದು. ಇದರಿಂದ ಅನಿಲದ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

error: Content is protected !!