ಉಡುಪಿ: ಫೆ.22 – 27 ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಜನಧ್ವನಿ ಪಾದಯಾತ್ರೆ
ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಫೆ.22ರಿಂದ 27ರ ವರೆಗೆ ಜನಧ್ವನಿ ಪಾದಯಾತ್ರೆ ಕೈಗೊಳ್ಳಲಾಗಿದೆ. 6 ದಿನಗಳ ಕಾಲ ನಡೆಯುವ ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ.
ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಕೈಗೊಂಡಿದ್ದು, 6ದಿನಗಳ ಕಾಲ ನಡೆಯುವ ಪಾದಯಾತ್ರೆಯಲ್ಲಿ ಜಿಲ್ಲೆಯ ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ, ಕುಂದಾಪುರ, ಬೈಂದೂರಿನ ಹಲವು ಕಡೆಗಳಿಗೆ ತೆರಳಿ ಜನಜಾಗೃತಿ ಮೂಡಿಸಲಾಗುತ್ತದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕಾಂಗ್ರೆಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಪಾದಯಾತ್ರೆ ಫೆ.22ರಂದು ಪ್ರಾರಂಭಗೊಳ್ಳಲಿದ್ದು, ಅಂದು ಬೆಳಿಗ್ಗೆ 9.30 ಕ್ಕೆ ಹೆಜಮಾಡಿ ಟೋಲ್ಗೇಟ್ ನಲ್ಲಿ ಪ್ರಾರಂಭಿಸಿ ಅಲ್ಲಿಂದ ಬಳಿಕ ಬಂಟರ ಭವನ , ತೆಂಕ ಎರ್ಮಾಳ್ ತಲುಪಿ ಅಲ್ಲಿಂದ ಮಧ್ಯಾಹ್ನ 1 ಗಂಟೆ ವೇಳೆಗೆ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತಲುಪುತ್ತದೆ. ಬಳಿಕ 3 ಗಂಟೆಗೆ ಕಾಪು ಪೇಟೆಯಲ್ಲಿ ಪಾದಯಾತ್ರೆಯ ಮೊದಲ ದಿನದ ಸಭೆ ನಡೆಯಲಿದೆ.
ಪಾದಯಾತ್ರೆಯ ಎರಡನೇ ದಿನವಾದ ಫೆ.23 ರಂದು ಬೆಳಿಗ್ಗೆ 9 ಗಂಟೆಗೆ ರಾಜೀವ ಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡು ಮಧ್ಯಾಹ್ನದ ವೇಳೆಗೆ ಕಟಪಾಡಿ ತಲುಪಿ ಅಲ್ಲಿ ಕಾರ್ನರ್ ಮೀಟಿಂಗ್ ನಡೆಯಲಿದೆ. ಬಳಿಕ ಬಲಾಯಿಪಾದೆಯಲ್ಲಿ ಆ ದಿನದ ಪಾದಯಾತ್ರೆ ಸಮಾಪ್ತಿಗೊಳ್ಳಲಿದೆ. ಫೆ.24 ರಂದು ಬೆಳಿಗ್ಗೆ9 ಗಂಟೆಗೆ ಬಲಾಯಿಪಾದೆಯಿಂದ ಆರಂಭಗೊಂಡು ಕಲ್ಯಾಣಪುರ ಸಂತೆಕಟ್ಟೆ ಮೂಲಕ ತೆರಳಿ ಸಂಜೆ 6 ಗಂಟೆಗೆ ಬ್ರಹ್ಮಾವರದಲ್ಲಿ ಅಂದಿನ ಪಾದಯಾತ್ರೆಯ ಸಭೆ ನಡೆಯಲಿದೆ.
ಮರುದಿನ ಫೆ. 25 ರಂದು ಬ್ರಹ್ಮಾವರ ಮತ್ತು ಸಾಲಿಗ್ರಾಮ ದಲ್ಲಿ ಪಾದಯಾತ್ರೆ ನಡೆಯಲಿದ್ದು ಮಧ್ಯಾಹ್ನ 2 ಗಂಟೆ ಬಳಿಕ ಕುಂದಾಪುರದ ಶಾಸ್ತ್ರಿ ವೃತ್ತ ತಲುಪಿ ಅಲ್ಲಿ ಪಾದಯಾತ್ರೆ ಯ 4 ನೇ ದಿನದ ಸಭೆ ನಡೆಯಲಿದೆ. ಫೆ.26 ರಂದು ಬೆಳಿಗ್ಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ನಿಂದ ಆರಂಭಗೊಂಡು ಮುಳ್ಳಿಕಟ್ಟೆ , ಅರೆ ಹೊಳೆ ತಲುಪಲಿದ್ದು ಅಲ್ಲಿ ಪಾದಯಾತ್ರೆಯ ಸಭೆ ನಡೆಯಲಿದೆ. ಇನ್ನು ಪಾದಯಾತ್ರೆ ಯ ಕೊನೆಯ ದಿನ ಫೆ. 27 ರಂದು ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡು 3 ಗಂಟೆಗೆ ಬೈಂದೂರಿನಲ್ಲಿ ಪಾದಯಾತ್ರೆಯ ಬೃಹತ್ ಸಮಾಪನಾ ಸಭೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಬ್ಲಾಕ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ದಿನಕರ್ ಹೆರೂರು, ಚಂದ್ರ ಕುಂದರ್, ಮಂಜುನಾಥ್ ಪೂಜಾರಿ, ಸದಾಶಿವವ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಶಶಿಧರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕುಮಾರ್ ಇನ್ನಾ, ಹರೀಶ್ ಕಿಣಿ, ನರಸಿಂಹಮೂರ್ತಿ, ಭಾಸ್ಕರ್ ಕಿದಿಯೂರು, ರೋಶನಿ ವೆಲೇವಿರಾ, ಸುಕುಮಾರ್ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ ಉಪಸ್ಥಿತರಿದ್ದರು.