ಶತಕ ಬಾರಿಸಿದ ಪೆಟ್ರೋಲ್: ಹಿಂದಿನ ಸರ್ಕಾರವನ್ನು ಹೊಣೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಪೆಟ್ರೋಲ್ ಪ್ರತಿ ಲೀಟರ್ ಬೆಲೆ 100 ರೂ. ದಾಟಿದ್ದು ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಬಗ್ಗೆ ಹಿಂದಿನ ಸರ್ಕಾರಗಳು ಗಮನಹರಿಸದಿದ್ದೆ ಇಂದು ಮಧ್ಯಮ ವರ್ಗದವರಿಗೆ ಹೊರೆಯಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಸುಮ್ಮನಿದ್ದ ಪ್ರಧಾನಿ ಮೋದಿ ಅವರು ಇಂದು ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚೆನ್ನೈನಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಹಿಂದಿನ ಸರ್ಕಾರವನ್ನು ಹೊಣೆಯಾಗಿಸಿದ್ದಾರೆ. 

ನಮ್ಮ ಹಿಂದಿನ ಸರ್ಕಾರಗಳು ಇಂಧನಗಳ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದೆ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ಇನ್ನು 2019-20ನೇ ಸಾಲಿನಲ್ಲಿ ಶೇ. 85ರಷ್ಟು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ ಎಂದರು. 

ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರು, ಬಡವರಿಗೆ ತೀವ್ರ ಹೊರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂಧನದ ಆಮದಿನ ಮೇಲೆ ನಾವು ಇಷ್ಟೊಂದು ಪ್ರಮಾಣದಲ್ಲಿ ಅವಲಂಬನೆ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ. 

ಪೆಟ್ರೋಲ್ ದರ 100 ರೂಪಾಯಿ ದಾಟಿದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ. ಇನ್ನುಳಿದಂತೆ ದೇಶದ ಇತರ ರಾಜ್ಯಗಳಲ್ಲಿ ಸರಿಸುಮಾರು 92 ರೂಪಾಯಿ ಆಸುಪಾಸಿನಲ್ಲಿ ಪೆಟ್ರೋಲ್ ದರವಿದೆ.

Leave a Reply

Your email address will not be published. Required fields are marked *

error: Content is protected !!