ಕೋವಿಡ್‌ ವಾರಿಯರ್ಸ್’ಗೆ ಸಿಗದ ವಿಮೆ ಪರಿಹಾರ: ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲು

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೇ ಕರ್ತವ್ಯ ನಿರ್ವಹಿಸಿ ಮೃತಪಟ್ಟ ಕೋವಿಡ್ ವಾರಿಯರ್ಸ್ ಗೆ ಸರ್ಕಾರ ಘೋಷಣೆ ಮಾಡಿದ್ದ ವಿಮೆ ಪರಿಹಾರ ಪಾವತಿಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಕೋವಿಡ್‌ ಕರ್ತವ್ಯದಲ್ಲಿ ಭಾಗಿಯಾಗಿ ಮೃತಪಟ್ಟ ಕೋವಿಡ್ ವಾರಿಯರ್ಸ್ ಕುಟುಂಬಗಳಿಗೆ ವಿಮಾ ಪರಿಹಾರ ಪಾವತಿಯಾಗದ ವಿಷಯವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸರ್ಕಾರದ ವಿವಿಧ ಇಲಾಖೆಗಳಿಗೆ ಪ್ರತಿಕ್ರಿಯೆ ಕೇಳಿ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.

ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಅವರು, ತಮ್ಮ ಅಧಿಕಾರಿಗಳಿಗೆ ಈ ವಿಚಾರವಾಗಿ ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿದ್ದಾರೆ. ಅದರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬಿಬಿಎಂಪಿ ಆಯುಕ್ತರು ಸೇರಿ 11 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದ್ದಾರೆ.

ಮೃತಪಟ್ಟ ಕೋವಿಡ್ ವಾರಿಯರ್ಸ್ ಕುಟುಂಬ ಸದಸ್ಯರ ಅಹವಾಲುಗಳನ್ನು ಆಲಿಸಬೇಕು. ಕೂಡಲೇ ಸಮಸ್ಯೆ ಸರಿಪಡಿಸಬೇಕು. ಈ ಸಂಬಂಧ ಮೂರು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ. ಅಂತೆಯೇ ಆರೋಗ್ಯ ಕಾರ್ಯಕರ್ತರು, ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳ ನೌಕರರು, ಆಶಾ ಕಾರ್ಯಕರ್ತೆ ಸೇರಿ ಕರ್ತವ್ಯ ನಿರ್ವಹಣೆ ವೇಳೆ ಕೋವಿಡ್ ನಿಂದಾಗಿ ಮೃತಪಟ್ಟವರು ಎಷ್ಟು ಎಂಬ ವಿವರ ಸಲ್ಲಿಸಬೇಕು. ಎಷ್ಟು ಕುಟುಂಬಗಳಿಗೆ 30 ಲಕ್ಷ ರೂ ವಿಮಾ ಪರಿಹಾರ ನೀಡಲಾಗಿದೆ, ಇನ್ನೂ ಎಷ್ಟು ಮಂದಿಗೆ ಪರಿಹಾರ ನೀಡುವುದು ಬಾಕಿ ಇದೆ..? ಪರಿಹಾರ ನೀಡಿಕೆ ವಿಳಂಬಕ್ಕೆ ಕಾರಣಗಳೇನು ಎಂಬುದರ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

‘ಮೃತರ ಕುಟುಂಬಕ್ಕೆ ಈಗಾಗಲೇ ಪಾವತಿಸಲಾಗಿರುವ ವಿಮಾ ಮೊತ್ತ ಮತ್ತು ರಾಜ್ಯವು ನಿರ್ದಿಷ್ಟಪಡಿಸಿದ ಇತರೆ ಪರಿಹಾರ ಮೊತ್ತಗಳು, ಪರಿಗಣನೆಗೆ ಬಾಕಿ ಇರುವ ಅರ್ಜಿಗಳ ಸಂಖ್ಯೆ, ತಿರಸ್ಕರಿಸಿದ ಅರ್ಜಿಗಳ ಸಂಖ್ಯೆ, ನಿರಾಕರಣೆಯ ಕಾರಣಗಳು ಮತ್ತು ವಿಳಂಬದ ಕಾರಣಗಳ ಬಗ್ಗೆ ವಿವರಗಳನ್ನು ಲೋಕಾಯುಕ್ತರು ಕೇಳಿದ್ದಾರೆ.  ಅರ್ಜಿಗಳ ವಿಲೇವಾರಿಯಲ್ಲಿ ಪರಿಹಾರವನ್ನು ವಿತರಿಸಲು ವಿಳಂಬಕ್ಕೆ ಕಾರಣವಾದ ಅಂಶಗಳು ಮತ್ತು ಅಧಿಕಾರಿಗಳ ವಿವರಗಳನ್ನೂ ಅವರು ಕೋರಿದ್ದಾರೆ ಎನ್ನಲಾಗಿದೆ

ಅಲ್ಲದೇ ಕೋವಿಡ್‌ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿ ಪ್ರಾಣ ಕಳೆದುಕೊಂಡವರ ಕುಟುಂಬದವರ ರಕ್ಷಣೆಯ ಜವಾಬ್ದಾರಿ ಸರ್ಕಾರದ್ದೆ ಆಗಿದೆ. ಅವರು ಯಾವುದೇ ಕಾರಣಕ್ಕೂ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶವೂ ಇದೆ. ಮೃತ ಕೋವಿಡ್  ವಾರಿಯರ್ಸ್ ಕುಟುಂಬಗಳನ್ನು ಅಲೆದಾಡಿಸದೆ ಕೂಡಲೇ ವಿಮಾ ಪರಿಹಾರ ಪಾವತಿಸಬೇಕು ಎಂದು ಅವರು ಆದೇಶದಲ್ಲಿ ಸೂಚನೆ ನೀಡಿದ್ದಾರೆ. 

ಅಂತೆಯೇ ಈ ಸಂಬಂಧ ಉತ್ತರಿಸಲು ಸರ್ಕಾರಕ್ಕೆ ಮೂರು ವಾರಗಳ ಅಂತಿಮ ಗಡುವು ನೀಡಿದ್ದು. ಮುಂದಿನ ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!