ಸಾಸ್ತಾನ ಟೋಲ್ ಗೇಟ್: ಸ್ಥಳೀಯ ವಾಹನಗಳಿಗೆ ವಿನಾಯಿತಿ ಆಗ್ರಹಿಸಿ ಪ್ರತಿಭಟನೆ
ಉಡುಪಿ: ದೇಶದಾದ್ಯಂತ ಇಂದಿನಿಂದ ಪಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಸಾಸ್ತಾನ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ಆಗ್ರಹಿಸಿ ನಾಗರೀಕರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಗುತ್ತಿಗೆದಾರ ಕಂಪೆನಿ ವಿರುದ್ಧ ಧಿಕ್ಕಾರ ಗೂಗಿದ್ದು ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಇದೇ ವೇಳೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೆ ಸ್ಥಳೀಯ ಗ್ರಾಮಸ್ಥರಿಗೆ ಸಂಕಷ್ಟವಾಗಲಿದ್ದು, ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಸುಂಕ ಪಡೆಯಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಲಾಗಿತ್ತು. ದೇಶದಾದ್ಯಂತ ಟೋಲ್ ಗೇಟ್ಗಳಲ್ಲಿ ಇಂದಿನಿಂದ ಪಾಸ್ಟ್ ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶಿಸಿತ್ತು. ಈ ಹಿನ್ನಲೆ ಸಾಸ್ತಾನದಲ್ಲಿರುವ ನವಯುಗ ಕಂಪೆನಿಯ ಟೋಲ್ ಗೇಟ್ ನಲ್ಲಿ ಇಂದಿನಿಂದ ಕಡ್ಡಾಯ ಫಾಸ್ಟ್ ಟ್ಯಾಗ್ ಆದೇಶ ಪಾಲನೆ ಮಾಡಲು ಮುಂದಾಗಿದೆ. ಇದರಿಂದ ಇಲ್ಲಿಯವರಗೆ ಸ್ಥಳೀಯ ವಾಹನಗಳಿಗೆ ಸಿಗುತ್ತಿದ್ದ ವಿನಾಯಿತಿ ರದ್ದಾಗುವ ಸಾಧ್ಯತೆ ಇದ್ದು, ಇದರ ವಿರುದ್ದ ಸ್ಥಳೀಯ ಗ್ರಾಮಸ್ಥರು ಪಾಸ್ಟ್ಯಾಗ್ ನಿಂದ ವಿನಾಯಿತಿಗೆ ಆಗ್ರಹಿಸಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.