ನಮ್ಮ ಕುಟುಂಬದಿಂದ ಪ್ರಧಾನ ಮಂತ್ರಿಯಾಗಿದ್ದು 30 ವರ್ಷಗಳ ಹಿಂದೆ: ವಂಶ ರಾಜಕಾರಣ ಬಗ್ಗೆ ರಾಹುಲ್ ಗಾಂಧಿ ಉತ್ತರ!

ನವದೆಹಲಿ: ಕುಟುಂಬ, ವಂಶ ರಾಜಕೀಯದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಉತ್ತರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮ್ಮ ಕುಟುಂಬದಿಂದ ಪ್ರಧಾನ ಮಂತ್ರಿಯಾಗಿ 30 ವರ್ಷಗಳು ಕಳೆದಿವೆ. ಮಾಜಿ ಪ್ರಧಾನ ಮಂತ್ರಿಯ ಮಗನಾಗಿ ತಾತ್ವಿಕ ಸಿದ್ಧಾಂತಗಳಿಗೆ ನನ್ನ ಹೋರಾಟ ನಿಲ್ಲಿಸುವುದಿಲ್ಲ, ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. 

ಚಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ದೀಪೇಶ್ ಚಕ್ರವರ್ತಿ ಅವರ ಜೊತೆ ನಡೆಸಿದ ಮುಕ್ತ ಸಂವಾದದ ವೇಳೆ ರಾಹುಲ್ ಗಾಂಧಿ, ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಟ್ರೋಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಯಾವುದರ ಪರ ನಿಲ್ಲಬೇಕು, ಏನು ಮಾಡಬೇಕು ಎಂಬ ಬಗ್ಗೆ ನನಗೆ ಟ್ರೋಲ್ ಗಳು ಮಾರ್ಗದರ್ಶನದಂತೆ ಎಂದು ಭಾವಿಸುತ್ತೇನೆ ಎಂದರು.

ಟ್ರೋಲ್ ಗಳು ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು, ನನ್ನ ಸ್ಥಾನ ಏನು, ನಾನು ಏನು ಮಾಡಬೇಕು ಎಂಬುದನ್ನು ಸೂಚಿಸುತ್ತದೆ. ನನಗೆ ಯಾವುದೇ ಬೇಸರ, ವಿಷಾದಗಳಿಲ್ಲ. ನಾನು ಏನು ಮಾಡಬೇಕು ಎಂಬುದಕ್ಕೆ ನನ್ನನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ, ಅದೊಂಥರಾ ನನಗೆ ಮಾರ್ಗದರ್ಶನ ಇದ್ದಂತೆ. ನಾನು ಎಲ್ಲಿ ಹೋಗಬೇಕು, ಯಾವುದರ ಪರ ನಿಲ್ಲಬೇಕು, ಹೇಗಿರಬೇಕು ಎಂದು ನನಗೆ ಹೇಳಿಕೊಡುತ್ತದೆ. ಹೀಗಾಗಿ ನನ್ನನ್ನು ನಾನು ತಿದ್ದಿಕೊಳ್ಳಲು, ಬೆಳೆಯಲು ಸಹಾಯ ಮಾಡುತ್ತದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ನ ಪ್ರಭಾವ, ಅಧಿಕಾರ ಶಕ್ತಿ ಕಡಿಮೆಯಾಗಿರುವುದರ ಬಗ್ಗೆ ಒಂದೆಡೆ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ ವಂಶ ರಾಜಕೀಯದ ಬಗ್ಗೆ ಮಾತನಾಡುತ್ತಾರೆ ಈ ಬಗ್ಗೆ ಏನು ಹೇಳುತ್ತೀರಿ ಎಂದು ಚಕ್ರವರ್ತಿ ಕೇಳಿದರು. ಆಗ ರಾಹುಲ್ ಗಾಂಧಿ, ಸುಮಾರು 30 ವರ್ಷಗಳ ಹಿಂದೆ ನನ್ನ ಕುಟುಂಬ ಸದಸ್ಯರು ಈ ದೇಶದ ಪ್ರಧಾನ ಮಂತ್ರಿಯಾಗಿದ್ದು, ಅದಾದ ಬಳಿಕ ನಮ್ಮ ಕುಟುಂಬದಿಂದ ಯಾರೂ ಪ್ರಧಾನಿಯಾಗಲಿಲ್ಲ. 

ಕಳೆದ ಯುಪಿಎ ಸರ್ಕಾರ ಅವಧಿಯಲ್ಲಿ ನಮ್ಮ ಕುಟುಂಬದವರು ಯಾರೂ ಪ್ರಧಾನಿಯಾಗಿರಲಿಲ್ಲ. ನನಗೆ ನನ್ನದೇ ಆದ ಸೈದ್ಧಾಂತಿಕ ದೃಷ್ಟಿಕೋನವಿದೆ. ನಾನು ಕೆಲವು ವಿಚಾರಗಳಿಗಾಗಿ ಹೋರಾಡುತ್ತೇನೆ. ನನ್ನ ತಂದೆ ರಾಜೀವ್ ಗಾಂಧಿಯಾಗಿದ್ದರಿಂದ ತತ್ವ, ಸಿದ್ಧಾಂತಗಳಿಗೆ ಹೋರಾಡಬಾರದು ಎಂದರೆ ನಾನು ಕೇಳುವುದಿಲ್ಲ, ನನ್ನ ಅಜ್ಜಿ, ಮುತ್ತಜ್ಜ ಯಾರು ಎಂದು ನನಗೆ ಬೇಕಾಗಿಲ್ಲ, ಸದ್ಯದ ಭಾರತದ ಪರಿಸ್ಥಿತಿಯಲ್ಲಿ ತತ್ವ, ಸಿದ್ಧಾಂತಗಳ ಬಗ್ಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದು ಖಡಾಖಂಡಿತವಾಗಿ ಹೇಳಿದರು.

ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದು 1984ರಿಂದ 1989ರವರೆಗೆ. ಗಾಂಧಿ ಕುಟುಂಬದಲ್ಲಿ ಕೊನೆಯ ಬಾರಿ ಪ್ರಧಾನಿಯಾಗಿದ್ದು ಅವರೇ. ಅವರ ಮೊದಲು ಅವರ ತಾಯಿ ಇಂದಿರಾ ಗಾಂಧಿ ಮತ್ತು ಜವಹರಲಾಲ್ ನೆಹರೂ ಈ ದೇಶದ ಪ್ರಧಾನ ಮಂತ್ರಿಯಾಗಿದ್ದರು. 

ಯುಪಿಎ ಮೈತ್ರಿಕೂಟ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂಬ ಮಾತನ್ನು ಅವರು ಒಪ್ಪಲಿಲ್ಲ. ಅಧಿಕಾರಕ್ಕೆ ಬಂದ ಮೇಲೆ ಕೆಲ ವರ್ಷ ನಮ್ಮ ದೃಷ್ಟಿಕೋನವನ್ನು ಜನತೆ ಮುಂದಿಡಲು ಸಮಯ ಬೇಕಾಗುತ್ತದೆ. ಹಸಿರು ಕ್ರಾಂತಿಗೆ ನಾವು ಒಂದು ದೃಷ್ಟಿಕೋನ ನೀಡಿದೆವು. ಉದಾರೀಕರಣವನ್ನು ದೇಶಕ್ಕೆ ನೀಡಿದೆವು. 2004ರಲ್ಲಿ 1990ರ ದಶಕದ ದೃಷ್ಟಿಕೋನಕ್ಕೆ ಹೊಸ ರೂಪವನ್ನು ನೀಡಿದೆವು. ದೇಶದ ಬಹಳಷ್ಟು ಮಂದಿಯನ್ನು ಬಡತನದಿಂದ ಹೊರಗೆ ತರಲು ಸಹಾಯವಾಯಿತು ಎನ್ನುವ ರಾಹುಲ್ ಗಾಂಧಿ ಕಾಂಗ್ರೆಸ್ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎನ್ನುತ್ತಾರೆ. 

Leave a Reply

Your email address will not be published. Required fields are marked *

error: Content is protected !!