ರಾಹುಲ್ ಗಾಂಧಿ ಭಾರತದ ‘ಬೊಗಳೆ ದಾಸ’ ಆಗುತ್ತಿದ್ದಾರೆ: ಹಣಕಾಸು ಸಚಿವೆ ನಿರ್ಮಲಾ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೇಲೆ ಲೋಕಸಭೆಯಲ್ಲಿ ಶನಿವಾರ ತೀಕ್ಷ್ಣವಾಗಿ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿಯವರು ಭಾರತದ ಬೊಗಳೆ ದಾಸರಾಗಿಬಿಟ್ಟಿದ್ದಾರೆ. ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತಾ, ಹಲವು ವಿಷಯಗಳ ಕುರಿತು ಇಲ್ಲಸಲ್ಲದ ಸುಳ್ಳು ಕಥೆ ಸೃಷ್ಟಿಸುತ್ತಿದ್ದಾರೆ ಎಂದು ನೂತನ ಶೈಲಿಯಲ್ಲಿ ನಿರ್ಮಲಾ ಸೀತಾರಾಮನ್ ರಾಹುಲ್ ಗಾಂಧಿಯವರ ಮೇಲೆ ಆರೋಪ ಮಾಡಿದರು. 

ಬಜೆಟ್-2021 ಮೇಲಿನ ಚರ್ಚೆಗೆ ಲೋಕಸಭೆಯಲ್ಲಿಂದು ಉತ್ತರಿಸುವ ವೇಳೆ ಸಚಿವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿನಕ್ಕೊಂದು ಸುಳ್ಳು ಸಂಗತಿಗಳನ್ನು ಸೃಷ್ಟಿಸುತ್ತಾ ಹೋಗುತ್ತಾರೆ, ಸರ್ಕಾರದ ಮೇಲೆ ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ಕೇಳುವ ತಾಳ್ಮೆ ಮಾತ್ರ ಅವರಿಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಎರಡು ಪ್ರವೃತ್ತಿ ಇದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸಂಸದೀಯ ವ್ಯವಸ್ಥೆ ಮೇಲೆ ಕಾಂಗ್ರೆಸ್ ನಾಯಕರಿಗೆ ವಿಶ್ವಾಸ, ನಂಬಿಕೆ ಸಂಪೂರ್ಣ ಹೋಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ರಾಹುಲ್ ಗಾಂಧಿಯವರು ಭಾರತಕ್ಕೆ ಒಂಥರಾ ಬೊಗಳೆ ದಾಸರಾಗಿಬಿಟ್ಟಿದ್ದಾರೆ ಎಂದರು.

ಸದನದಲ್ಲಿ ರಾಹುಲ್ ಗಾಂಧಿಯವರು 10 ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಭಾವಿಸಿದ್ದೆ, ಆದರೆ ಅವುಗಳನ್ನು ಅವರು ಪ್ರಸ್ತಾಪವೇ ಮಾಡಲಿಲ್ಲ. ಬಜೆಟ್ ಬಗ್ಗೆ ಮಾತನಾಡದೇ ಇರುವುದು ಬೇಸರ ತಂದಿದೆ ಎಂದರು.

ಕೃಷಿ ಕಾಯ್ದೆ: ಯುಪಿಎ ಆಳ್ವಿಕೆ ಸಮಯದಲ್ಲಿ ಕೃಷಿ ಕಾನೂನನ್ನು ಬೆಂಬಲಿಸಿದ್ದವರು ಇಂದು ಯು-ಟರ್ನ್ ಏಕೆ ತೆಗೆದುಕೊಂಡಿದ್ದಾರೆ ಎಂದು ಕೇಳಿದರೆ ಕಾಂಗ್ರೆಸ್ ಬಳಿ ಉತ್ತರವಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ರೈತರ ಕೃಷಿಸಾಲ ಮನ್ನಾ ಮಾಡಲಿಲ್ಲ ಏಕೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಉತ್ತರ ನೀಡಲಿಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಕೂಡ ರಾಹುಲ್ ಗಾಂಧಿಯವರು ಮಾತನಾಡಲಿಲ್ಲ, ಕೋಲು ಸುಡುವಿಕೆ ಅಲ್ಲಿನ ರೈತರ ಜ್ವಲಂತ ಸಮಸ್ಯೆಯಾಗಿದೆ, ಆ ಬಗ್ಗೆ ಕೂಡ ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿಲ್ಲವೇಕೆ, ಇನ್ನು ಕೃಷಿ ಕಾಯ್ದೆಯಲ್ಲಿ ರೈತರಿಗೆ ಏನು ಅನನುಕೂಲಗಳಿವೆ ಎಂಬುದನ್ನು ಕೂಡ ರಾಹುಲ್ ಗಾಂಧಿಯವರು ಹೇಳುತ್ತಿಲ್ಲ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿಪಾದಿಸಿದ್ದ ಎಪಿಎಂಸಿ ಸುಧಾರಣೆಗಳ ಬಗ್ಗೆ ಕೂಡ ರಾಹುಲ್ ಗಾಂಧಿಯವರು ಮಾತನಾಡಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ನಾವಿಬ್ಬರು, ಹಮ್ ದೋ, ಹಮಾರೇ ದೋ ಎಂಬುದರ ಬಗ್ಗೆ ಮಾತ್ರ ಚಿಂತೆಯಾಗಿದೆ. ನಮ್ಮ ಸರ್ಕಾರವನ್ನು ಟೀಕಿಸುವ ಮೊದಲು ರೈತರಿಂದ ಅಲ್ಪಮೊತಕ್ಕೆ ಖರೀದಿಸಿದ ಜಮೀನನ್ನು ಮೊದಲು ಹಿಂತಿರುಗಿಸಿ ಎಂದು ಸದನದಲ್ಲಿ ನಿರ್ಮಲಾ ಸೀತಾರಾಮನ್ ರಾಹುಲ್ ಗಾಂಧಿಗೆ ಸವಾಲು ಹಾಕಿದರು.

ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ತನ್ನದೇ ಸರ್ಕಾರ ಪ್ರಕಟಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ನಾಯಕ ಕಿತ್ತು ಹಾಕಿದಾಗ ನಡೆದ ಘಟನೆಯನ್ನು ನೆನಪಿಸಿದ ನಿರ್ಮಲಾ ಸೀತಾರಾಮನ್, ಸಾಂವಿಧಾನಿಕ ಅಧಿಕಾರಕ್ಕೆ ರಾಹುಲ್ ಗಾಂಧಿ ಅವಮಾನಿಸಿದ್ದಾರೆ, ಸರ್ಕಾರವನ್ನು ಟೀಕಿಸುವ ಭರದಲ್ಲಿ ದೇಶಕ್ಕೆ ರಾಹುಲ್ ಗಾಂಧಿಯವರು ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!