ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಮತ್ತೊಂದು ಶಾಕ್!
ನವದೆಹಲಿ: ಈರುಳ್ಳಿ ಹಚ್ಚುವಾಗ ಕಣ್ಣೀರು ಬರೋದು ಸಾಮಾನ್ಯ ಆದರೆ ಈಗ ಈರುಳ್ಳಿ ಖರೀದಿಸಬೇಕು ಅಂದುಕೊಳ್ಳುವಾಗಲೂ ಕಣ್ಣೀರು ಬರುತ್ತಿದೆ. ಹೌದು ಈಗಾಗಲೇ ಪೆಟ್ರೋಲ್, ಡೀಸೆಲ್ ಗ್ಯಾಸ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಇದು ಸಾಲದೆಂಬಂತೆ ಈರುಳ್ಳಿ ಬೆಲೆಯೂ ಏರಲಾರಂಭಿಸಿದೆ.
ಕಳೆದ ಕೆಲ ವಾರಗಳಲ್ಲಿ ಈರುಳ್ಳಿ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ವರ್ಷದ ಆರಂಭದಲ್ಲಿ ಕೆ.ಜಿ.ಗೆ 25 ರಿಂದ 30 ರೂ. ಇದ್ದ ಈರುಳ್ಳಿ ಬೆಲೆ ಈಗ 65 ರಿಂದ 75 ರೂಗಳಿಗೆ ಏರಿಕೆಯಾಗಿದೆ.
ದಕ್ಷಿಣ ಭಾರತದಲ್ಲಿ ಈರುಳ್ಳಿ ಸರಬರಾಜಿನಲ್ಲಿ ಕುಸಿತವಾಗಿದೆ. ಹಾಗೆ ಗುಜರಾತ್ ಹಾಗೂ ಮಧ್ಯಪ್ರದೇಶದಿಂದಲೂ ಈರುಳ್ಳಿ ಬೇಡಿಕೆಗೆ ತಕ್ಕಷ್ಟು ಮಾರುಕಟ್ಟೆಗೆ ಬರ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಸದ್ಯ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮಾರ್ಚ್ ನಂತ್ರ ಹೊಸ ಬೆಳೆ ಬರಲಿದ್ದು, ಬೆಲೆ ಇಳಿಕೆ ನಿರೀಕ್ಷಿಸಬಹುದೆಂದು ತಜ್ಞರು ಹೇಳಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪೆಟ್ರೋಲ್ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೆ ಇರುವ ಈ ಸಂದರ್ಭದಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.