ಪ್ರಧಾನಿ ಮೋದಿ ಒಬ್ಬ ಹೇಡಿ, ಚೀನಾವನ್ನು ಎದುರಿಸುವ ಧೈರ್ಯ, ತಾಕತ್ತು ಅವರಿಗಿಲ್ಲ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತಕ್ಕೆ ಸೇರಿದ ಪ್ರಾಂತ್ಯವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇಶದ ಜನತೆಗೆ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್ 2020ರವರೆಗೆ ಪೂರ್ವ ಲಡಾಕ್ ನಲ್ಲಿ ಭಾರತ ಸೇನೆಯ ಸ್ಥಿತಿ ಯಥಾಸ್ಥಿತಿಯಲ್ಲಿತ್ತು. ಇಂದು ಭಾರತೀಯ ಪಡೆ ಫಿಂಗರ್ 3ರಲ್ಲಿ ನಿಲುಗಡೆಯಾಗಲಿದೆ ಎಂದು ರಕ್ಷಣಾ ಸಚಿವರು ನಿನ್ನೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದು ಮತ್ತು ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅರಿವಿಗೆ ಬಂದಿದೆ. ಫಿಂಗರ್ 4 ಭಾರತಕ್ಕೆ ಸೇರಿದ ಪ್ರಾಂತ್ಯವಾಗಿದೆ. ಅಲ್ಲಿ ನಮ್ಮ ಸೇನೆ ಹೋಗಿ ನಿಲುಗಡೆಯಾಗಬೇಕು. ಅದು ಬಿಟ್ಟು ಪ್ರಧಾನಿ ಮೋದಿಯವರು ಭಾರತಕ್ಕೆ ಸೇರಿದ ಜಾಗವನ್ನು ಏಕೆ ಚೀನಾ ದೇಶಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ನಮ್ಮ ಸೇನಾಪಡೆ ಕಷ್ಟಪಟ್ಟು ಕೈಲಾಶ್ ವಲಯವನ್ನು ವಶಪಡಿಸಿಕೊಂಡಿದೆ. ಅಲ್ಲಿಂದ ಹಿಂದೆ ಸರಿಯುವಂತೆ ಸೇನೆಗೆ ಏಕೆ ಹೇಳಲಾಗುತ್ತಿದೆ. ಕೈಲಾಶ ವಲಯವನ್ನು ಹಿಂಪಡೆದಿದ್ದಕ್ಕೆ ಭಾರತಕ್ಕೆ ಸಿಕ್ಕಿರುವುದಾದರೂ ಏನು, ಅತ್ಯಂತ ಕಾರ್ಯತಂತ್ರ ಹೊಂದಿರುವ ಸ್ಥಳವಾದ ಡೆಪ್ಸಂಗ್ ಪ್ರಸ್ಥಭೂಮಿಯಿಂದ ಚೀನಾದ ಸೇನಾಪಡೆ ಹಿಂದೆ ಸರಿದಿಲ್ಲವೇಕೆ, ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶಗಳಿಂದಲೂ ಚೀನಾ ತನ್ನ ಸೇನೆಯನ್ನು ಹಿಂದೆ ಪಡೆದುಕೊಂಡಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಕೇಂದ್ರ ಸರ್ಕಾರದಲ್ಲಿ ಕೇಳಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರುಚೀನಾಕ್ಕೆ ಭಾರತದ ಪ್ರಾಂತ್ಯಗಳನ್ನು ಬಿಟ್ಟುಕೊಟ್ಟು ಅವರ ಮುಂದೆ ತಲೆ ತಗ್ಗಿಸಿ ನಿಂತಿದ್ದಾರೆ ಎಂದು ಟೀಕಿಸಿದರು.

ಮೋದಿ ಒಬ್ಬ ಹೇಡಿ ಪ್ರಧಾನ ಮಂತ್ರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೇಡಿ ಎಂದು ಕರೆದ ರಾಹುಲ್ ಗಾಂಧಿ, ಚೀನಾವನ್ನು ಎದುರಿಸಿ ನಿಲ್ಲುವ ತಾಕತ್ತು, ಧೈರ್ಯ ಅವರಿಗಿಲ್ಲ ಎಂದು ದೂಷಿಸಿದ್ದಾರೆ.

ಪ್ರಧಾನ ಮಂತ್ರಿಗಳು ಹೇಡಿಗಳು, ಅವರಿಗೆ ಚೀನಾದ ಮುಂದೆ ನಿಲ್ಲುವ ತಾಕತ್ತು ಇಲ್ಲ, ನಮ್ಮ ಸೈನಿಕರ ತ್ಯಾಗ, ಬಲಿದಾನಗಳು ನಿಷ್ಟ್ರಯೋಜಕವಾಗುವಂತೆ ಮಾಡುತ್ತಿದ್ದಾರೆ. ಸೇನೆಯ ತ್ಯಾಗವನ್ನು ದೇಶದ್ರೋಹಗೊಳಿಸುತ್ತಿದ್ದಾರೆ. ಒಬ್ಬ ಭಾರತೀಯನಾಗಿ ಯಾರೂ ಅಂತಹ ಕೆಲಸ ಮಾಡಬಾರದು. ಭಾರತದ ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಸೇರಿದ ಇಂಚಿಂಚು ಜಾಗವನ್ನು ಕಾಪಾಡುವುದು, ರಕ್ಷಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಅದನ್ನು ಯಾವ ರೀತಿ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದರು.

ನಿನ್ನೆ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಒಂದು ಇಂಚು ನೆಲವನ್ನು ಕೂಡ ಬಿಟ್ಟುಕೊಡುವುದಿಲ್ಲ, ಪ್ರಧಾನ ಮಂತ್ರಿ ಮೋದಿಯವರ ಆದೇಶ, ಸೂಚನೆ ಪ್ರಕಾರ ಚೀನಾದ ಜೊತೆಗೆ ಸೇನೆ ಹಿಂತೆಗೆದುಕೊಳ್ಳುವ ಮಾತುಕತೆಯಾಗಿದ್ದು ನಾವು ಯಾರೊಬ್ಬರಿಗೂ ಒಂದು ಇಂಚು ಜಾಗವನ್ನು ಸಹ ಬಿಟ್ಟುಕೊಡುವುದಿಲ್ಲ. ನಮ್ಮ ದೃಢ ನಿರ್ಧಾರದಿಂದಾಗಿ ಒಪ್ಪಂದದ ಪರಿಸ್ಥಿತಿಗೆ ನಾವು ತಲುಪಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಕಳೆದ ವರ್ಷ ಏಪ್ರಿಲ್-ಮೇ ತಿಂಗಳಿನಿಂದ ಎರಡೂ ದೇಶಗಳು ಸೇನೆ ನಿಯೋಜನೆಯನ್ನು ಹೊಂದಿದ್ದು ಚೀನಾ ಸಾಕಷ್ಟು ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದ್ದರೆ, ಭಾರತ ಅದಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಾ ಬಂದಿದೆ.

Leave a Reply

Your email address will not be published. Required fields are marked *

error: Content is protected !!