ನಾವಿಬ್ಬರು, ನಮ್ಮವರಿಬ್ಬರು: ಕೃಷಿ ಕಾಯ್ದೆ ವಿರೋಧಿಸುತ್ತಾ ರಾಹುಲ್ ಗಾಂಧಿ ಹೀಗೇಕೆ ಹೇಳಿದ್ದು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಈ ಕಾಯ್ದೆಗಳು ಕೈಗಾರಿಕೋದ್ಯಮಿಗಳಿಗೆ ಧಾನ್ಯಗಳನ್ನು ಅನಿಯಮಿತ ಪ್ರಮಾಣದಲ್ಲಿ ಖರೀದಿಸಿ, ಸಂಗ್ರಹಿಸಿಕೊಳ್ಳುವುದಕ್ಕೆ ಅವಕಾಶ ನೀಡಲಿದೆ ಎಂದು ಆರೋಪಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಕೇವಲ ರೈತರದ್ದಲ್ಲ, ಇಡೀ ದೇಶದ ಚಳುವಳಿ ಎಂದು ಹೇಳಿರುವ ರಾಹುಲ್ ಗಾಂಧಿ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯಲೇ ಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಲೋಕಸಭೆಯಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಪ್ರತಿಭಟನೆ ವೇಳೆ ಮೃತಪಟ್ಟ 200 ರೈತರಿಗೆ ಸಂತಾಪ ಸೂಚಿಸಲು ರಾಹುಲ್ ಗಾಂಧಿ ತಮ್ಮ ಪಕ್ಷದ ಸದಸ್ಯರು, ಟಿಎಂಸಿ, ಡಿಎಂಕೆ ಸದಸ್ಯರೊಂದಿಗೆ 2 ನಿಮಿಷಗಳ ಕಾಲ ಮೌನಾಚರಣೆ ಮಾಡಿದರು. ಸರ್ಕಾರ ಗೌರವ ನೀಡಿಲ್ಲ ಆದ್ದರಿಂದ ನಾವು ಮಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾಷಣವನ್ನು ಮುಂದುವರೆಸಿ ಮಾತನಾಡಿರುವ ರಾಹುಲ್ ಗಾಂಧಿ, ಮೊದಲನೆಯ ಕೃಷಿ ಕಾಯ್ದೆಯ ಉದ್ದೇಶ ಭಾರತದ ಎಲ್ಲಾ ಬೆಳೆಗಳನ್ನೂ ಖರೀದಿಸುವುದಕ್ಕೆ ಓರ್ವ ಸ್ನೇಹಿತನಿಗೆ ಹಕ್ಕು ನೀಡುವುದಾಗಿದೆ. ಇದರಿಂದ ಯಾರಿಗೆ ನಷ್ಟ? ಗಾಡಿಯಲ್ಲಿ ಮಾರಾಟ ಮಾಡುವವರಿಗೆ, ಸಣ್ಣ ವ್ಯಾಪಾರಸ್ಥರಿಗೆ, ಹಾಗೂ ಮಂಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಆಗಲಿದೆ.
ಎರಡನೇ ಕಾಯ್ದೆಯ ಉದ್ದೇಶ 2ನೇ ಸ್ನೇಹಿತನಿಗೆ ಲಾಭ ಮಾಡಿಕೊಡುವುದಾಗಿದೆ. ಈ ಎರಡನೇ ಸ್ನೇಹಿತ ದೇಶದ ಶೇ.40 ರಷ್ಟು ಬೆಳೆಗಳನ್ನು ತನ್ನ ಬಳಿ ಸಂಗ್ರಹಿಸಿಟ್ಟು ಕೊಳ್ಳಲಿದ್ದಾನೆ. ಆಯ್ಕೆಗಳನ್ನು ನೀಡಿರುವುದಾಗಿ ಪ್ರಧಾನಿ ಹೇಳುತ್ತಾರೆ. ಹೌದು, ನೀವು ಮೂರು ಆಯ್ಕೆಗಳನ್ನು ನೀಡಿದ್ದೀರಿ, ಅವು ಹಸಿವು, ನಿರುದ್ಯೋಗ ಹಾಗೂ ಆತ್ಮಹತ್ಯೆ ಎಂದು ಸರ್ಕಾರವನ್ನು ರಾಹುಲ್ ಗಾಂಧಿ ತಿವಿದಿದ್ದಾರೆ.
ಇದೇ ವೇಳೆ ಹಳೆಯ ಕುಟುಂಬ ಯೋಜನೆಯ ಘೋಷಣಾ ವಾಕ್ಯವನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ನಾವಿಬ್ಬರು, ನಮ್ಮವರಿಬ್ಬರು ಎಂಬಂತೆ ಕೇವಲ 4-5 ಜನರು ದೇಶವನ್ನು ನಡೆಸುತ್ತಿದ್ದಾರೆ. ಹೊಸ ಕೃಷಿ ಕಾಯ್ದೆಗಳು ಭಾರತದ ಆಹಾರ ಭದ್ರತೆಯ ವ್ಯವಸ್ಥೆಯನ್ನು ನಾಶ ಮಾಡಲಿದ್ದು, ಗ್ರಾಮೀಣ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂದು ಹೇಳಿದ್ದಾರೆ. ರೈತರು ಎಲ್ಲಿಗೂ ಹೋಗುವುದಿಲ್ಲ ಆದರೆ ಈ ಸರ್ಕಾರವನ್ನು ಇಳಿಸಲಿದ್ದಾರೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.