ಕೆಂಪುಕೋಟೆ ಬಳಿ ದಾಂಧಲೆ: ಕೊನೆಗೂ ಪೊಲೀಸರ ಮುಂದೆ ಬಾಯ್ಬಿಟ್ಟ ನಟ-ಹೋರಾಟಗಾರ ದೀಪು ಸಿಧು!

ನವದೆಹಲಿ: ಗಣರಾಜ್ಯೋತ್ಸವ ದಿನದಿಂದು ಕೆಂಪುಕೋಟೆ ಬಳಿ ಹಿಂಸಾಚಾರಕ್ಕಾಗಿ ಬಂಧನಕ್ಕೊಳಗಾಗಿರುವ  ನಟ- ಹೋರಾಟಗಾರ ದೀಪು ಸಿಧು ಕೊನೆಗೂ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದು, ಎಲ್ಲರೂ ಐತಿಹಾಸಿಕ ಕೆಂಪು ಕೋಟೆಗೆ ಹೋಗುತ್ತಿದ್ದರಿಂದ ನಾನು ಕೂಡಾ ಹೋದೆ. ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಜನವರಿ 26ರಂದು ಕೆಂಪುಕೋಟೆ ಬಳಿ ನಡೆದ ದಾಂಧಲೆಗೆ ಸಂಬಂಧಿಸಿದಂತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಬುಧವಾರ ದೀಪು ಸಿಧುವನ್ನು ವಿಚಾರಣೆಗೊಳಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪು ಕೋಟೆ ಬಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕರ್ನಾಲ್ ಬೈಪಾಸ್ ಬಳಿ ಬಂಧಿಸಲಾಗಿದ್ದ ದೀಪು ಸಿಧುನನ್ನು ಏಳು ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ ಜನವರಿ 26 ರಂದು ನಡೆದ ಘಟನೆ ಹಿಂದೆ ಸಿಧು ಪ್ರಮುಖ ಪಾತ್ರ ವಹಿಸಿದ್ದಾನೆ.

ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ನಂತರ ಸಿಧುನನ್ನು ಅಪರಾಧ ವಿಭಾಗದ ಪೊಲೀಸರ ವಶಕ್ಕೆ ನೀಡಲಾಗಿದೆ. ಇದು ಕೆಂಪುಕೋಟೆ ಬಳಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿದೆ.ಮೊದಲ ದಿನದ ವಿಚಾರಣೆ ಸಂದರ್ಭದಲ್ಲಿ ಕೆಂಪು ಕೋಟೆಗೆ ಸಿಧು ಹಾಗೂ ಹೋರಾಟಗಾರರು ಹೇಗೆ ತೆರಳಿದರು ಎಂಬುದರ ಬಗ್ಗೆ ಮಾಹಿತಿ ಪಡೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಸಿಂಘು ಗಡಿಯಲ್ಲಿ ತಾನಿರಲಿಲ್ಲ ಎಂದು ಹೇಳುತ್ತಿದ್ದ ಸಿಧುವಿಗೆ ಪೊಲೀಸರು ಸಾಕ್ಷ್ಯಧಾರ ತೋರಿಸಿದ ಬಳಿಕ ರೈತರ ಪ್ರತಿಭಟನೆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಲಗಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.  ಜನವರಿ 26 ರಂದು ಜನರು ಕೆಂಪುಕೋಟೆಯತ್ತ ತೆರಳುತ್ತಿರುವ ಬಗ್ಗೆ ಎರಡ್ಮೂರು ಕರೆಗಳು ಮತ್ತು ಸಂದೇಶ ತನ್ನ ಮೊಬೈಲ್ ಫೋನ್ ಗೆ ಬಂದಿತ್ತು. ಹಾಗಾಗಿ ತನ್ನ ಸ್ನೇಹಿತರ ಜೊತೆಗೆ ತಾನೂ ಸಹ ಕೆಂಪುಕೋಟೆಗೆ ತೆರಳಿದ್ದಾಗಿ  ಹೇಳಿದ್ದಾನೆ. 

ಕೆಂಪು ಕೋಟೆ ಬಳಿ ಧ್ವಜ ಹಾರಾಟದಲ್ಲಿ ತನ್ನ ಪಾತ್ರವೇನಿಲ್ಲ. ಜನರನ್ನು ಸೇರಿಸಲಿಲ್ಲ, ಮತ್ತೆ ಧ್ವಜ ಹಾರಾಟಕ್ಕೆ ಯಾವುದೇ ರೀತಿಯ ಪ್ರಚೋದನೆ ನೀಡಲಿಲ್ಲ ಎಂದಿರುವ ದೀಪು ಸಿಧು, ಎಲ್ಲರೂ ಕೂಡಾ ಹೋಗುತ್ತಿದ್ದರಿಂದ ತಾನೂ ಕೂಡಾ ಕೆಂಪುಕೋಟೆಯತ್ತ ತೆರಳಿದೆ. ಆದರೆ, ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ದೀಪು ಸಿಧುವಿನ ಮೊಬೈಲ್ ಫೋನ್ ವಶಕ್ಕೆ ಪಡೆದು, ಆತ ಅಡಗಿದ್ದ ಸ್ಥಳಗಳ ಹುಡುಕಾಟ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಆತ ವಿಚಾರಣೆ ಸಂದರ್ಭದಲ್ಲಿ ನೀಡಿದ ಹೇಳಿಕೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಸಿಧು ಬಂಧಿಸಲು ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.

ಜನವರಿ 26 ರಂದು ಹಿಂಸಾಚಾರ ಸಂಭವಿಸಿದ ನಂತರ ಸುಮಾರು 500 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಪ್ರತಿಭಟನಾಕಾರನೋರ್ವ ಮೃತಪಟ್ಟಿದ್ದ. 36 ವರ್ಷದ ದೀಪು ಸಿಧು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!