ಬೇಡಿಕೆ ಈಡೇರುವವರೆಗೂ ಮನೆಗೆ ವಾಪಸ್ ಹೋಗುವ ಮಾತೇ ಇಲ್ಲ: ರೈತ ಮುಖಂಡ ರಾಕೇಶ್ ಟಿಕಾಯತ್
ಚಕ್ರಿ ದಾದ್ರಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಜನಾಂದೋಲನವಾಗಿದ್ದು, ಅದು ವಿಫಲವಾಗಲ್ಲ ಎಂಬ ಅಚಲ ವಿಶ್ವಾಸ ವ್ಯಕ್ತಪಡಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ತಮ್ಮ ಬೇಡಿಕೆ ಈಡೇರುವವರೆಗೂ ಮನೆಗೆ ವಾಪಸ್ ಹೋಗುವ ಮಾತೇ ಇಲ್ಲ ಎಂದಿದ್ದಾರೆ.
ರೈತರ ಹೋರಾಟವನ್ನು ಬೆಂಬಲಿಸುತ್ತಿರುವ ಕಾಪ್ ಪಂಚಾಯತ್ ( ಜಾತಿ ಸಮಿತಿಗಳು ) ಮತ್ತು ಅವರ ಮುಖಂಡರ ಪಾತ್ರವನ್ನು ಟಿಕಾಯತ್ ಹೊಗಳಿದ್ದಾರೆ.
ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು, ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡಬೇಕು ಮತ್ತು ಇತ್ತೀಚಿಗೆ ಬಂಧನಕ್ಕೊಳಗಾದ ರೈತರನ್ನು ಬಿಡುಗಡೆ ಮಾಡಬೇಕೆಂದು ಹೇಳಿದರು.
ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಜನಾಂದೋಲನವಾಗಿದ್ದು, ಇದು ವಿಫಲವಾಗುವುದಿಲ್ಲ, ರೈತರ ಬೇಡಿಕೆ ಈಡೇರುವವರೆಗೂ ಮನೆಗೆ ವಾಪಸ್ ಹೋಗಲ್ಲ. ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಮತ್ತಷ್ಟು ಗಟ್ಟಿಯಾಗಲಿದೆ ಎಂದು ತಿಳಿಸಿದರು.
ಹೋರಾಟ ಆರಂಭವಾದಾಗ ಇದು ಪಂಜಾಬ್ ಮತ್ತು ಹರಿಯಾಣ ವಿರುದ್ಧದ ಹೋರಾಟ ಎಂದು ಕರೆಯುವ ಮೂಲಕ ಹೋರಾಟವನ್ನು ಒಡೆಯುವ ಪ್ರಯತ್ನ ಮಾಡಲಾಗಿತ್ತು ಎಂದು ಹೇಳಿದ ಟಿಕಾಯತ್, ರೈತರ ಯೂನಿಯನ್ ಗಳು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ಮನವಿ ಮಾಡಿದರು.