ಉತ್ತರಾಖಂಡ ಹಿಮ ಸುನಾಮಿ: 2019ರಲ್ಲೇ ಎಚ್ಚರಿಕೆ ಕೊಟ್ಟಿದ್ದ ವಿಜ್ಞಾನಿಗಳು!

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸಂಭವಿಸಿರುವ ಹಿಮ ಸುನಾಮಿ ಕುರಿತಂತೆ 2019ರಲ್ಲೇ ವಿಜ್ಞಾನಿಗಳ ತಂಡ ಎಚ್ಚರಿಕೆ ಕೊಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.

ಉತ್ತರಾಖಂಡದಲ್ಲಿ ಸಂಭವಿಸಿರುವ ಹಿಮ ಸುನಾಮಿ ಏಟಿಗೆ ಸುಮಾರು 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದಾಗಿ ಉತ್ತರಾಖಂಡದಲ್ಲಿ ವ್ಯಾಪಕ ಪ್ರವಾಹ ಸಂಭವಿಸಿದ್ದು, ಹಲವು ಜೆಲ್ಲೆಗಳು ನೀರಿನಲ್ಲಿ ಮುಳುಗಿವೆ. ಘಟನೆಯಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದು, 170ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ರವಿವಾರ ಕಣ್ಣುಮುಚ್ಚಿ ತೆರೆಯುವುದರೊಳಗೆ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದೆ. ಈ ಹಿಮ ಪ್ರವಾಹವು ಧೌಲಿಗಂಗಾ ನದಿಯ ಮೂಲಕ ಉಕ್ಕಿ ಹರಿದು ಹಲವು ಜೀವಗಳನ್ನು ಬಲಿತೆಗೆದುಕೊಂಡಿದೆ. ದೇಶವನ್ನೇ ಬೆಚ್ಚಿ ಬೀಳಿಸಿರುವ ಈ ಘಟನೆಗೆ ಹವಾಮಾನ ವೈಪರೀತ್ಯ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ತಾಪಮಾನ ಏರಿಕೆಯಿಂದಾಗಿ ಉತ್ತರಾಖಂಡದ ಹಿಮಗಲ್ಲುಗಳು ಕರಗಿ ಸ್ಫೋಟವಾಗಿವೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ. ಅಲ್ಲದೆ ಈ ಬಗ್ಗೆ 2019ರಲ್ಲೇ ವಿಜ್ಞಾನಿಗಳ ತಂಡ ಸಂಭಾವ್ಯ ದುರಂತದ ಕುರಿತು ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

ಹೌದು.. 2019ರಲ್ಲಿ ಬಹಿರಂಗಗೊಂಡ ವರದಿಯೊಂದು ಇಂಥಹ ದುರ್ಘಟನೆಗಳ ಬಗ್ಗೆ ಭವಿಷ್ಯ ನುಡಿದಿತ್ತು ಎನ್ನಲಾಗಿದೆ. ತಾಪಮಾನ ಏರಿಕೆಯಿಂದಾಗಿ 21ನೇ ಶತಮಾನದ ಆರಂಭದಿಂದಲೇ ಹಿಮಾಲಯದ ನೀರ್ಗಲ್ಲುಗಳು ದುಪ್ಪಟ್ಟು ವೇಗದಲ್ಲಿ ಕರಗುತ್ತಿವೆ. ಪ್ರಮುಖವಾಗಿ ಭಾರತ, ಚೀನ, ನೇಪಾಲ ಮತ್ತು ಭೂತಾನ್‌ ನಾದ್ಯಂತ 40 ವರ್ಷಗಳ ಕಾಲ ಉಪಗ್ರಹದ ಮೂಲಕ ಪರಿವೀಕ್ಷಣೆ ನಡೆಸಿ 2019ರಲ್ಲಿ ಈ ವರದಿ ತಯಾರಿಸಲಾಗಿತ್ತು.  ಅದರಂತೆ ಜಗತ್ತಿನ ವಿವಿಧೆಡೆಯ ಬೃಹತ್ ನೀರ್ಗಲ್ಲುಗಳು ದಪ್ಪಟ್ಟು ವೇಗದಲ್ಲಿ ಕರಗುತ್ತಿವೆ. ಇದಕ್ಕೆ ಹಿಮಾಲಯದ ನೀರ್ಗಲ್ಲುಗಳು ಕೂಡ ಹೊರತಾಗಿಲ್ಲ ಎಂದು ವಿಜ್ಞಾನಿಗಳ ತಂಡ ಆತಂಕ ವ್ಯಕ್ತಪಡಿಸಿತ್ತು.

ಹಿಮಾಲಯದ ಹಿಮನದಿಗಳು ಎಷ್ಟು ವೇಗವಾಗಿ ಕರಗುತ್ತಿವೆ ಎಂಬುದಕ್ಕೆ ಹಾಲಿ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಪಿಎಚ್ ಡಿ ಅಭ್ಯರ್ಥಿ ಜೋಶುವಾ ಮೌರರ್ ಹೇಳಿದ್ದಾರೆ.

ವರ್ಷಕ್ಕೆ ಅರ್ಧ ಮೀಟರ್‌ ನಷ್ಟು ಕರಗುತ್ತಿವೆ ನೀರ್ಗಲ್ಲುಗಳು
1975ರಿಂದ 2000ದ ವರೆಗೆ ಹಿಮಾಲಯದ ನೀರ್ಗಲ್ಲುಗಳು ಎಷ್ಟು ಪ್ರಮಾಣದಲ್ಲಿ ಕರಗಿದ್ದವೋ, ಅದರ ದುಪ್ಪಟ್ಟು ಪ್ರಮಾಣದಲ್ಲಿ ಈಗ ಅವುಗಳು ಕರಗತೊಡಗಿವೆ. ಕಳೆದ 4 ದಶಕಗಳಲ್ಲಿ ನೀರ್ಗಲ್ಲುಗಳು ತಮ್ಮ ಕಾಲು ಭಾಗ ದಷ್ಟು ದ್ರವ್ಯ ರಾಶಿಯನ್ನೇ ಕಳೆದುಕೊಂಡಿವೆ. 1975- 2000ದ ಅವಧಿಗೆ ಹೋಲಿಸಿದರೆ 2000-2016ರ ವರೆಗೆ ತಾಪಮಾನವು ಸರಾಸರಿ 1 ಡಿ.ಸೆ.ನಷ್ಟು ಹೆಚ್ಚಾಗಿದೆ. ಈ ಹಿಂದೆ ನೀರ್ಗಲ್ಲುಗಳು ಸುಮಾರು 0.25 ಮೀಟರ್‌ನಷ್ಟು ಮಂಜುಗಡ್ಡೆಗಳನ್ನು ಕಳೆದುಕೊಂಡಿದ್ದರೆ, 2000ದ ಬಳಿಕ ವಾರ್ಷಿಕ ಅರ್ಧ ಮೀಟರ್ನಷ್ಟು ಮಂಜುಗಡ್ಡೆ ಕರಗಿ ಹೋಗಿವೆ ಎಂದು ವರದಿ ತಿಳಿಸಿದೆ.

ನೀರ್ಗಲ್ಲು ಸ್ಫೋಟಕ್ಕೆ ಕಾರಣವೇನು?
ನೀರಿನ ಒತ್ತಡ ಹೆಚ್ಚುವುದು, ಸವಕಳಿ, ಹಿಮಪಾತ, ನೀರ್ಗಲ್ಲುಗಳ ಕೆಳಗೆ ಭೂಕಂಪ… ಹೀಗೆ ಬೇರೆ ಬೇರೆ ಕಾರಣಗಳಿಂದ ನೀರ್ಗಲ್ಲುಗಳು ಸ್ಫೋಟಗೊಳ್ಳಬಹುದು. ಜತೆಗೆ, ಒಂದು ನೀರ್ಗಲ್ಲುಗಳ ಸರೋವರದ ಮೇಲೆ ಮತ್ತೂಂದು ನೀರ್ಗಲ್ಲು ಬಂದು ಢಿಕ್ಕಿ ಹೊಡೆದಾಗಲೂ ಇಂಥ ಘಟನೆ ಸಂಭವಿಸಬಹುದು.

ನಂದಾದೇವಿ ನೀರ್ಗಲ್ಲು
ಚಮೋಲಿ ಜಿಲ್ಲೆಯ ನಂದಾದೇವಿ ನೀರ್ಗಲ್ಲು ಸ್ಫೋಟಗೊಂಡಿದ್ದೇ ಧೌಲಿಗಂಗಾ ನದಿಯ ಪ್ರವಾಹಕ್ಕೆ ಕಾರಣ. ಕಾಂಚನ ಜುಂಗಾ ಭಾರತದ ಅತೀ ಎತ್ತರದ ಶಿಖರವಾಗಿದ್ದು, ನಂದಾದೇವಿ ಎರಡನೇ ಅತೀ ಎತ್ತರದ ಶಿಖರವಾಗಿದೆ. ನಂದಾ ದೇವಿಯ ನೀರ್ಗಲ್ಲುಗಳು ಕರಗಿ ಸೃಷ್ಟಿಯಾಗುವ ನೀರು ಹಲವು ತೊರೆಗಳಾಗಿ, ನದಿಗಳಾಗಿ ಹರಿಯುತ್ತವೆ. ಈ ನೀರು ಮೊದಲಿಗೆ ರಿಷಿಗಂಗಾ ನದಿಗೆ ಹರಿದು, ಅಲ್ಲಿಂದ ಧೌಲಿ ಗಂಗಾ ದತ್ತ ಸಂಚರಿಸುತ್ತದೆ. ಧೌಲಿ ಗಂಗಾ ಎನ್ನುವುದು ಗಂಗಾ ನದಿಯ ಉಪನದಿಯಾಗಿದ್ದು, ಇದು ಅನಂತರ‌ ವಿಷ್ಣುಪ್ರಯಾಗದ ಅಲಕಾನಂದಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಧೌಲಿ ಗಂಗಾ ನದಿಯು ಜೋಷಿಮಠ, ಕರ್ಣಪ್ರಯಾಗದ ಮೂಲಕ ಹಾದುಹೋದರೆ, ಅಲಕಾನಂದಾ ನದಿಯು ಉತ್ತರಾಖಂಡದ ಶ್ರೀನಗರ, ಹರಿದ್ವಾರ, ರಾಣಿ ಖೇತ್‌, ಭೀಮ್‌ ತಲ್‌, ಹಲ್ದಾನಿಯನ್ನು ದಾಟಿ ಸಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಸುಭದ್ರಾ ಮಾತಾ ತಪಸ್ಸಿನ ಸ್ಥಳ
ಫೆ.4ರಂದು ಅಸ್ತಂಗತರಾದ ಆದಿ ಉಡುಪಿ ಮೂಲದ ಸುಭದ್ರಾ ಮಾತಾ ಅವರು ಉತ್ತರಾಖಂಡದ ತಪೋವನದಲ್ಲೇ 9 ವರ್ಷ ಕಠಿನ ತಪಸ್ಸನ್ನು ಆಚರಿಸಿದ್ದರು. ರವಿವಾರ ತಪೋವನದ ಹಿಮಗಡ್ಡೆಗಳು ಕರಗಿ ತಪೋವನದ ಇನ್ನೊಂದು ಮಗ್ಗುಲಾದ ಬದರಿ ಕಡೆ ಹಿಮಪ್ರವಾಹ ಹರಿದಿದೆ ಎಂದು ತಪೋವನಿ ಮಾತಾ ಅಂತಿಮ ಸಂಸ್ಕಾರಕ್ಕೆ ಹೋದ ಅವರ ಸಹೋದರ ನರೇಂದ್ರ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!