ತಿರಸ್ಕೃತ ರಾಜಕಾರಣಿಗಳು, ಬೋಗಸ್ ಬ್ರಿಗೇಡ್ ನಿಂದ ಭಾರತದ ಮಾನಹಾನಿ: ಕೇಂದ್ರ ಸಚಿವ ನಖ್ವಿ

ಕಾನ್ಪುರ: ತಿರಸ್ಕೃತ ರಾಜಕಾರಣಿಗಳು, ಬೋಗಸ್ ಬ್ರಿಗೇಡ್ ನಿಂದ ಭಾರತದ ಮಾನಹಾನಿ ಮಾಡುವ ಕ್ರಿಮಿನಲ್ ಪಿತೂರಿಯಲ್ಲಿ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 

ಕಾನ್ಪುರದಲ್ಲಿ ಫೆ.-06 ರಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ನಖ್ವಿ, ತಪ್ಪು ಮಾಹಿತಿಯನ್ನು ಹರಡುವ ಈ ರೀತಿಯ ಕ್ರಿಮಿನಲ್ ಗುಂಪುಗಳನ್ನು ಭಾರತದ ಜನತೆಯ ಬದ್ಧತೆ ಮಣಿಸಿದೆ. ”  ಈ ರೀತಿಯ ಜನಗಳು ಪಾಕಿಸ್ತಾನದ ಮೇಲೆ  ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಪ್ರಶ್ನಿಸಿದ್ದರು, ಸೋ ಕಾಲ್ಡ್- ಅಸಹಿಷ್ಣುತೆಯ ಕುರಿತು ದೇಶದಲ್ಲಿ ಗದ್ದಲ ಎಬ್ಬಿಸಿದ್ದರು. ಸಿಎಎ ಕುರಿತು ಗೊಂದಲ ಮೂಡಿಸಿದರು ಹಾಗೂ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದ ವೇಳೆ ಜನತೆಯ ಒಳಿತಿಗಾಗಿ ಕೈಗೊಂಡ ಕ್ರಮಗಳನ್ನು ವಿರೋಧಿಸಿದ್ದರು” ಎಂದು ನಖ್ವಿ ಆರೋಪಿಸಿದ್ದಾರೆ. 

“ಈಗ ದಾರಿ ತಪ್ಪಿಸುವ ಗ್ಯಾಂಗ್ ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡಿ ಅದರಲ್ಲಿಯೂ ರಾಜಕಾರಣ ಮಾಡುತ್ತಿದೆ, ದೇಶದಲ್ಲಿರುವ ಕೆಲವು ಮಂದಿಗೆ ಈಗಲೂ ಊಳಿಗಮಾನ್ಯ ದುರಹಂಕಾರ ಇದೆ” ಎಂದು ತೀಕ್ಷ್ಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಎಲ್ಲಾ ಕ್ರಿಮಿನಲ್ ಪಿತೂರಿಗಳನ್ನು, ಪಟ್ಟಭದ್ರ ಹಿತಾಸಕ್ತಿಗಳ ಎಲ್ಲಾ ಬೂಟಾಟಿಕೆಗಳನ್ನೂ ಜನತೆ ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಾರೆ. 2014 ಹಾಗೂ 2019 ರಲ್ಲಿ ಜನತೆ ಎನ್ ಡಿಎ ಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ನಖ್ವಿ ಹೇಳಿದ್ದಾರೆ. 

ಬಿಜೆಪಿಗೆ ವಿಧಾನಸಭಾ ಚುನಾವಣೆಗಳಲ್ಲಿ, ಪಂಚಾಯತ್ ಚುನಾವಣೆಗಳಲ್ಲಿ ಹಾಗೂ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿಗೆ ಅಭೂತ ಪೂರ್ವ ಬೆಂಬಲ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಚಂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ. 

“ಒಂದೆಡೆ ಬೋಗಸ್ ಬ್ರಿಗೇಡ್ ಅಲ್ಪಸಂಖ್ಯಾತರಲ್ಲಿ ಭಯ ಮೂಡಿದೆ ಎಂದು ಸುಳ್ಳು, ನಕಲಿ ಪ್ರಚಾರ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ಮೋದಿ ಅಲ್ಪಸಂಖ್ಯಾತರೂ ಸೇರಿ ಸಮಾಜದ ಎಲ್ಲಾ ವರ್ಗಗಳನ್ನು ಮುನ್ನೆಲೆ ಅಭಿವೃದ್ಧಿಯ ಸಮಾನ ಪಾಲುದಾರರನ್ನಾಗಿ ಮಾಡಲು ಅವಿರತ ಶ್ರಮಿಸುತ್ತಿದ್ದರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಲ್ಲಿ ಪ್ರಧಾನಿ ಮೋದಿ ಅವರ ಬದ್ಧತೆ ಈ ಎಲ್ಲಾ ನಕಲಿ ಪ್ರಚಾರವನ್ನು ಪ್ರತಿ ಬಾರಿಯೂ ಬಯಲು ಮಾಡಿದೆ ಎಂದು ನಖ್ವಿ ಹೇಳಿದ್ದಾರೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಮೋದಿ ಬಗ್ಗೆ ಇಡಿ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ ಎಂದು ನಖ್ವಿ ತಿಳಿಸಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆಯೂ ಮಾತನಾಡಿರುವ ಅವರು, 2021-22 ರ ಬಜೆಟ್ ಆತ್ಮನಿರ್ಭರ ಭಾರತ ಪಯಣದ ಗೆಜೆಟ್ ಎಂಬುದಾಗಿ ಬಣ್ಣಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!