ಅಡಿಕೆ ನುಂಗಿ ಒಂದು ವರ್ಷದ ಹಸುಗೂಸು ಮೃತ್ಯು!
ತೀರ್ಥಹಳ್ಳಿ: ಆಟವಾಡುತ್ತಿದ್ದ ಹಸುಗೂಸೊಂದು ಅಡಿಕೆ ನುಂಗಿ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮದಲ್ಲಿ ಇಂದು ಬೆಳಿಗ್ಗ ನಡೆದಿದೆ.
ಅರ್ಚನಾ ಸಂದೇಶ್ ಎಂಬುವರ ಮಗು ಶ್ರೀಹಾನ್(1) ಮೃತಪಟ್ಟ ಮಗು. ಅಡಿಕೆ ಪುಟ್ಟಿಯಲ್ಲಿದ್ದ ಅಡಿಕೆಯನ್ನ ನುಂಗಿ ಮಗುಗೆ ಉಸಿರುಗಟ್ಟಿತ್ತು. ತಕ್ಷಣ ಮಗುವನ್ನ ಕಟ್ಟೆಹಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಅಲ್ಲಿನ ವೈದ್ಯರ ಸಲಹೆ ಮೇರೆಗೆ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಶ್ರೀಹಾನ್ ಗೆ ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ಪ್ರಥಮ ಬಹುಮಾನ ಪಡೆಯುವ ಜೊತೆಗೆ ನಗದು ಪುರಸ್ಕಾರ ಕೂಡ ನೀಡಿ ಗೌರವಿಸಲಾಗಿತ್ತು.
ಮಲೆನಾಡಿನಲ್ಲಿ ಈಗಾಗಲೇ ಅಡಿಕೆ ಕೊಯ್ಲಿನ ಅಂತಿಮ ಹಂತದ ಸಮಯವಾಗಿದ್ದು, ಈ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿ ಅಡಿಕೆ ಸುಲಿದು ಬೇಯಿಸಿ ಒಣಗಿಸಿರುತ್ತಾರೆ. ಆದ್ದರಿಂದ ಇಂತಹ ಸಂದರ್ಬದಲ್ಲಿ ಚಿಕ್ಕ ಮಕ್ಕಳು ಇಂತಹ ಅನಾಹುತಕ್ಕೆ ಬಲಿಯಾಗುವುದನ್ನು ತಪ್ಪಿಸಲು ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವ ಅಗತ್ಯವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.