ಅಭಿವೃದ್ಧಿ ಕೆಲಸಕ್ಕೆ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ: ಸಚಿವ ಬೈರತಿ ಬಸವರಾಜ್

ಬೆಂಗಳೂರು: ಸಚಿವರಾದವರು ಸದಸ್ಯರ ಸಮಸ್ಯೆಗೆ ಉತ್ತರಿಸಬೇಕೇ ಹೊರತು ಸಚಿವರಾದವರೇ ಸದನದಲ್ಲಿ ಸಮಸ್ಯೆಯನ್ನು ಹೇಳುವುದಲ್ಲ ಎಂದು ಸಚಿವ ಬೈರತಿ ಬಸವರಾಜ್ ಅವರಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಮೇಲ್ಮನೆಯಲ್ಲಿ ನಡೆಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಸುನೀಲ್ ಸುಬ್ರಮಣಿ, ಮಡಿಕೇರಿಯಲ್ಲಿ ಉತ್ಪತ್ತಿಯಾಗುವ ಮಲಿನವಾಗಿರುವ ಒಳಚರಂಡಿ ನೀರನ್ನು ಯಾವ ರೀತಿ ಸಂಸ್ಕರಿಸಲಾಗುತ್ತದೆ ಮತ್ತು ಎಲ್ಲಿಗೆ ಹರಿಸಲಾಗುತ್ತದೆ ಎಂಬ ಕುರಿತು ಸಚಿವರು ಮಾಹಿತಿ ನೀಡಿದರು.

ಆಗ ಉತ್ತರಿಸಿದ ಸಚಿವ ಬೈರತಿ ಬಸವರಾಜ್, ಕೊಡಗಿನಲ್ಲಿ ಮಲೀನ ನೀರು ಶುದ್ದೀಕರಣಕ್ಕೆ ಬೇಡಿಕೆ ಬಂದಿದೆ. ಆದರೆ ಶುದ್ಧೀಕರಣಕ್ಕೆ ಸ್ಥಳದ ಕೊರತೆಯಿದೆ. ಶುದ್ಧೀಕರಣ ಘಟಕಕ್ಕೆ 4.5 ಎಕರೆ ಸ್ಥಳದ ಅವಶ್ಯಕತೆ ಇದೆ. ಜಾಗವನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ದೇವೆ. ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ, ಇದಕ್ಕೆ ಅನುದಾನವಿದೆ ಆದರೆ ಸ್ಥಳ ಇನ್ನೂ ಸಿಕ್ಕಿಲ್ಲ ಹುಡುಕಾಟದಲ್ಲಿದೆ. ಈಗಾಗಲೇ 27 ಕೋಟಿ ರೂ. ಖರ್ಚು ಮಾಡಿದ್ದು, ಇನ್ನೂ 22 ಕೋಟಿ ಇದೆ. ಸ್ಥಳವೇ ಸಿಗದಿದ್ದ ಮೇಲೆ ಏನು ಮಾಡಲು ಸಾಧ್ಯ ಎಂದು ಸಮಸ್ಯೆಯನ್ನು ವಿವರಿಸಲೆತ್ನಿಸಿದಾಗ ಸುನೀಲ್ ಸುಬ್ರಮಣಿ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರ ಈ ಹೇಳಿಕೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರೇ ನಿಮ್ಮ ಸಮಸ್ಯೆ ಹೇಳುವುದಲ್ಲ. ಸರ್ಕಾರದ ಪರ ಉತ್ತರ ಹೇಳಬೆಕೇ ಹೊರತು ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರೆ ಹೇಗೆ? ಸದನದಲ್ಲಿ ಉತ್ತರಿಸಬೇಕೇ ಹೊರತು ಸಮಸ್ಯೆ ಹೇಳುವುದಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಆಗ ಪ್ರತಿಕ್ರಿಯಿಸಿದ ಸಚಿವ ಬೈರತಿ ಬಸವರಾಜ್, ಅಧಿವೇಶನ ಮುಗಿದ ಬಳಿಕ ಕೊಡಗಿಗೆ ಭೇಟಿ ನೀಡಿ ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಸದನಕ್ಕೆ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!