ಬಜೆಟ್ ಮಂಡನೆ ಪ್ರಾಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್ : ‘ಬಹಿ ಖಾತಾ’ ಬದಲು ಕೈಗೆ ಬಂತು ಟ್ಯಾಬ್!

ನವದೆಹಲಿ: ಸದ್ಯ ಎಲ್ಲರ ಕುತೂಹಲ, ನಿರೀಕ್ಷೆ ಕೇಂದ್ರ ಬಜೆಟ್ ನತ್ತ ನೆಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. 

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಜನರ ನಿರೀಕ್ಷೆಗೆ ತಕ್ಕಂತೆ ಈ ಬಾರಿಯ ಕೇಂದ್ರ ಬಜೆಟ್ ಇರುತ್ತದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಮಂತ್ರದಡಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದ್ದು, ಆತ್ಮ ನಿರ್ಭರ ಪ್ಯಾಕೇಜ್ ಗಳನ್ನು ಘೋಷಣೆ ಮಾಡುವ ಮೂಲಕ ಭಾರತದ ಆರ್ಥಿಕತೆಗೆ ಹೊಸ ದಿಕ್ಕು ಬರೆದಿದೆ.

ಕೋವಿಡ್-19 ಸಂಕಷ್ಟದ ಸಮಯದಲ್ಲಿ ದೇಶವನ್ನು, ಜನರನ್ನು ರಕ್ಷಿಸಿ ಹಿಂದಿನ ಆರ್ಥಿಕ ಸ್ಥಿತಿಗೆ ಬಹಳ ವೇಗವಾಗಿ ತರುತ್ತಿದೆ ಎಂದು ಹೇಳಿದ್ದಾರೆ.

ಇದೀಗ ಕೆಲವೇ ಹೊತ್ತಿಗೆ ಮೊದಲು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಹಾಯಕ ಸಚಿವ ಅನುರಾಗ್ ಠಾಕೂರ್ ಸಚಿವಾಲಯದಿಂದ ರಾಷ್ಟ್ರಪತಿ ಭವನಕ್ಕೆ ಹೊರಟಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ನ್ನು ಇಂದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಆನ್ ಲೈನ್ ಮೂಲಕ ಬಜೆಟ್ ಪ್ರತಿ ಲಭ್ಯವಾಗಲಿದೆ.

ಟ್ಯಾಬ್ ಮೂಲಕ ಬಜೆಟ್ ಓದುವುದು: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನ್ನು ಟ್ಯಾಬ್ ಮೂಲಕ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಕಳೆದ ಎರಡು ವರ್ಷ ಅವರು ಬ್ರೀಫ್ ಕೇಸ್ ಗೆ ಬದಲು ಸಾಂಪ್ರದಾಯಿಕ ಬಹಿ ಖಾತಾ ಮೂಲಕ ಬಜೆಟ್ ಪ್ರತಿಗಳನ್ನು ಮಂಡಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದ ಕಾಗದರಹಿತವಾಗಿ ಟ್ಯಾಬ್ ಮೂಲಕ ಬಜೆಟ್ ಮಂಡಿಸಲಿದ್ದಾರೆ, ಈ ಮೂಲಕ ಡಿಜಿಟಲ್ ಆಗಿದೆ.

ಮಾಧ್ಯಮಗಳ ಮುಂದೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಟ್ಯಾಬ್ ನ್ನು ಸಚಿವೆ ನಿರ್ಮಲಾ ಸೀತಾರಾಮನ್ ನಗುಮುಖದಿಂದ ಪ್ರದರ್ಶಿಸಿದರು. 

Leave a Reply

Your email address will not be published. Required fields are marked *

error: Content is protected !!