ಕೋವಾಕ್ಸಿನ್ ಗಂಭೀರ ಅಡ್ಡ ಪರಿಣಾಮ ಉಂಟುಮಾಡಿದರೆ ‘ನಷ್ಟ ಪರಿಹಾರ’: ಭಾರತ್ ಬಯೋಟೆಕ್

ನವದೆಹಲಿ: ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಹರಡುವಿಕೆ ತಡೆಯುವ ಭಾಗವಾಗಿ ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನ ಶನಿವಾರ ಬೆಳಗ್ಗೆ ಆರಂಭಗೊಂಡಿದೆ. ದೇಶೀಯ ಔಷಧಿ ತಯಾರಿಕಾ ದಿಗ್ಗಜ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ‘ಕೋವಿಶೀಲ್ಡ್’ ಲಸಿಕೆಗಳ ವಿತರಣೆ ಪ್ರಾರಂಭಗೊಂಡಿದೆ. ಆದರೆ, ಇನ್ನೂ ಮೂರನೇ ಹಂತದ ಪ್ರಯೋಗದಲ್ಲಿರುವ ‘ಕೋವಾಕ್ಸಿನ್’ ಬಗ್ಗೆ ಸಾಕಷ್ಟು ಸಂದೇಹಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಭಾರತ ಬಯೋಟೆಕ್ ಸಂಸ್ಥೆ ಮಹತ್ವದ ಹೇಳಿಕೆ ನೀಡಿದೆ.

ತಮ್ಮ ಸಂಸ್ಥೆಯ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳಿಗೆ ಉಂಟಾಗಿದೆ ಎಂದು ರುಜುವಾತಾದರೆ ನಷ್ಟ ಪರಿಹಾರ ಕಲ್ಪಿಸುತ್ತೇವೆ ಎಂದು ಪ್ರಕಟಿಸಿದೆ. ಈ ಸಂಬಂಧ ಲಸಿಕೆ ಅನುಸರಣೆ ಪತ್ರದಲ್ಲಿ ಮಾಹಿತಿ ನೀಡಿದೆ.

‘ಕೋವಾಕ್ಸಿನ್’ ಲಸಿಕೆ ಇನ್ನೂ ಪ್ರಯೋಗಗಳ ಹಂತದಲ್ಲಿರುವುದರಿಂದ, ಈ ಲಸಿಕೆ ಪಡೆದುಕೊಂಡವರಿಂದ ಭಾರತ ಬಯೋಟೆಕ್ ಸಮ್ಮತಿ ಪತ್ರಕ್ಕೆ ಸಹಿಪಡೆದುಕೊಳ್ಳುತ್ತಿದೆ. ಈ ಪತ್ರದಲ್ಲಿ ಸಂಸ್ಥೆ ಹಲವು ಪ್ರಮುಖ ಅಂಶಗಳನ್ನು ವಿವರಿಸಿದೆ.

“ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ. ಕೋವಿಡ್ ವಿರುದ್ದ ಹೋರಾಡಲು ಈ ಲಸಿಕೆ ವ್ಯಕ್ತಿಗಳ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂಬುದನ್ನು ಮೊದಲ ಎರಡು ಪ್ರಯೋಗಗಳಲ್ಲಿ ಸಾಬೀತುಪಡಿಸಲಾಗಿದೆ. ಆದರೆ, ಪ್ರಸ್ತುತ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ.

ಸರ್ಕಾರ ದೃಢೀಕರಿಸಿದ ಲಸಿಕಾ ಕೇಂದ್ರದಲ್ಲಿ ‘ಕೋವಾಕ್ಸಿನ್’ ಲಸಿಕೆ ಪಡೆದುಕೊಂಡವರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಂಡುಬಂದರೆ ನಾವು ಪರಿಹಾರ ನೀಡುವ ಜತೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕಲ್ಪಿಸುತ್ತೇವೆ ಎಂದು ತಿಳಿಸಿದೆ.

ಆದರೆ ಲಸಿಕೆ ತೆಗೆದುಕೊಳ್ಳುವುದೆಂದರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಾರದು ಎಂದು ಅರ್ಥವಲ್ಲ ಎಂದು ಭಾರತ್ ಬಯೋಟೆಕ್ ಸಂಸ್ಥೆ ತನ್ನ ಸಮ್ಮತಿ ಪತ್ರದಲ್ಲಿ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!