ಮೋದಿ ಅವರ ಪ್ರತಿರೂಪವಾಗಿ ನಾವು ಕೆಲಸ ಮಾಡಬೇಕು: ಸಿ.ಟಿ ರವಿ

ಉಡುಪಿ: ಜನರು ನಮ್ಮ ಮೂಲಕ ಮೋದಿ ಅವರನ್ನು ನೋಡುತ್ತಾರೆ. ನಾವು ಮೋದಿ ಅವರ ಪ್ರತಿರೂಪವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಅವರು ಇಂದು ಉಡುಪಿಯ ಅಂಬಾಗಿಲುವಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಬಿಜೆಪಿಯ ರಾಜ್ಯ ಜನಸೇವಕ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವೊಂದು ಸೈದಾಂತಿಕ ಹಿನ್ನೆಲೆ ಇರುವ ರಾಜಕೀಯ ಪಕ್ಷದ ಕಾರ್ಯಕರ್ತರು ಆ ಪಕ್ಷದಿಂದ ಆಯ್ಕೆಯಾಗಿದ್ದೇವೆ ಎನ್ನುವ ಎಚ್ಚರ ಇರಬೇಕು.

ನಮಗಿರುವ ನೇತೃತ್ವ, ಉನ್ನತ ಆದರ್ಶಗಳ ಪರಿಪಾಲಕರಾಗಿರಬೇಕು. ಜನರು ನಮ್ಮ ಮೂಲಕ ಮೋದಿ ಅವರನ್ನು ನೋಡುತ್ತಾರೆ. ನಾವು ಮೋದಿ ಅವರ ಪ್ರತಿರೂಪವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಎಚ್ಚರ ನಮ್ಮಲ್ಲಿದ್ದಾಗ ಮಾತ್ರ ಕಾಂಗ್ರೆಸ್ ಕಲ್ಚರ್‌ನಿಂದ ದೂರ ವಿರಲು ಸಾಧ್ಯ. ಒಂದು ಕ್ಷಣ ಮೈ ಮರೆತರೂ ಅದು ನಮ್ಮ ಮನವನ್ನು, ನಮ್ಮ ಅಧಿಕಾರ ವ್ಯಾಪ್ತಿಯನ್ನು ಆವರಿಸಿಕೊಂಡು ನಮ್ಮನ್ನು ಒಂದು ದಿನ ಮುಳುಗಿಸಿ ಬಿಡುತ್ತೆ. ಹಾಗಾಗಿ ಎಚ್ಚರದಿಂದ ಕೆಲಸ ಮಾಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. 

ಕಾಂಗ್ರೆಸ್ ಮುಕ್ತ ರಾಜ್ಯ ಎನ್ನುವುದು ಕಾಂಗ್ರೆಸ್ ಪಕ್ಷ, ಅಥವಾ ಪಕ್ಷದ ನಾಯಕರ ವಿರೋಧಿಯಂದಲ್ಲ ಬದಲಾಗಿ ಕಾಂಗ್ರೆಸ್ ಮುಕ್ತ ರಾಜ್ಯವೆಂದರೆ ಕಾಂಗ್ರೆಸ್‌ ಕೆಲವು ಅನಿಷ್ಟಗಳಿಂದ ರಾಜ್ಯವನ್ನು ಮುಕ್ತಗೊಳಿಸುವುದಾಗಿ. ಹಿಂದೆ ಕಾಂಗ್ರೆಸ್ ಸರಕಾರ ಇದ್ದ ಸಮಯದಲ್ಲಿ ಆಗಿನ ಕೆಂದ್ರ ಸರಕಾರ ಜಾರಿಗೆ ತಂದಂತಹ ಯೋಜನೆಗಳನ್ನು ಜನಸಾಮನ್ಯರಿಗೆ ತಲುಪಿಸುವಲ್ಲಿ ಸರಕಾರ ವಿಫಲವಾಗಿತ್ತು ಆದರೆ ಇಂದಿನ ಪ್ರಧಾನಿ ನೇತೃತ್ವದ ಸರಕಾರದಲ್ಲಿ ಕೇಂದ್ರದ ಯೋಜನೆಗಳನ್ನು ರಾಜ್ಯದ ಕಟ್ಟಕಡೆಯ ಜನಸಾಮಾನ್ಯನಿಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.

ಅಭಿವೃದ್ಧಿ ಎಂದರೆ ಕೇವಲ ಚರಂಡಿ ನಿರ್ಮಾಣ ಕಟ್ಟಡಗಳ ನಿರ್ಮಾಣ ಮಾತ್ರವಲ್ಲ, ಸಮಾಜವನ್ನು ಬದಲಾವಣೆಯೊಂದಿಗೆ ಕರೆದುಕೊಂಡು ಹೋಗುವುದು ಸಮಾಜಿಕ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡುವುದೇ ನಿಜವಾದ ಸರ್ವತೋಮುಖ ಅಭಿವೃದ್ಧಿ ಎನಿಸಿಕೊಳ್ಳುತ್ತದೆ ಎಂದ ಅವರು, ಅಧಿಕಾರ ಎನ್ನುವುದು ಸ್ವಾರ್ಥ ಹಿತಕ್ಕಾಗಿ ಬಳಸಿಕೊಳ್ಳದೇ ಸಮಾಜದ ಹಿತಕ್ಕಾಗಿ ಅಭಿವೃದ್ಧಿಯನ್ನು ಸಾಧನವಾಗಿ ಬಳಸಿಕೊಳ್ಳಬೇಕು. ಪ್ರಧಾನ ಸೇವಕರಾಗಿ ಪ್ರಧಾನ ಮಂತ್ರಿಗಳು ಇರಲಿದ್ದು, ಜನ ಸೇವಕರಾಗಿ ನಾವೆಲ್ಲರೂ ದುಡಿಯುವ ಎಂದು ಕಾರ್ಯಕರ್ತರಿಗೆ ಕರೆ ನೀಡಿ, ಅವಕಾಶ ಹಾಗೂ ಸಂಪನ್ಮೂಲವನ್ನು ಸರಿಯಾಗಿ ಬಳಸಿ ಅಭಿವೃದ್ಧಿ ಯತ್ತ ಶ್ರಮಿಸುತ್ತ ನಮ್ಮ ಊರನ್ನು ಮಾದರಿ ಊರಾಗಿ ಮಾಡುವ ಎಂದು ಹೇಳಿದರು.

ದೇಶದ ಸಂಸ್ಕೃತಿ ಉಳಿಯಬೇಕು ಎನ್ನುವುದು ಜಾತ್ಯಾತೀತ ದೇಶದ ಪ್ರತಿಯೊಬ್ಬರ ಬಯಕೆಯಾಗಿದೆ.  ಪ್ರಧಾನಿ ಮೋದಿಯವರು ದೇಶದ ಜನತೆಯ ಅಭಿಲಾಶೆಯನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ .ಅದರ ಪ್ರತಿಯಾಗಿಯೇ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರಜೆಗಳ ಅಪೇಕ್ಷೆಯಂತೆ ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನ ಹಾಗೂ ಮಥುರದಲ್ಲಿ ಶ್ರೀ ಕೃಷ್ಣನ ದೇವಾಲಯಗಳು ನಿರ್ಮಾಣ ವಾಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿರುವು ನಮ್ಮ ಹೆಗ್ಗಳಿಕೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದನ್ನು ಸವಾಲಾಗಿ ಸ್ವೀಕರಿಸುವ ಜೊತೆಗೆ ಗೆದ್ದ ಮೇಲೆ ಏನೆಲ್ಲಾ ಸಾಧನೆ ಮಾಡಬೇಕು ಎಂಬದನ್ನೂ ಅಭ್ಯರ್ಥಿಗಳು ಸವಾಲಾಗಿ ಸ್ವೀಕರಿಸಬೇಕು. ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಶಾಸಕರು ಮತ್ತು ಮಂತ್ರಿಗಳ ಸಹಕಾರ ಪಡೆದು ಗ್ರಾಮೀಣ ಅಭಿವೃದ್ಧಿ ಕಡೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ 6 ಮಂಡಲದ ಕ್ಷೇತ್ರ ಅಧ್ಯಕ್ಷರಿಗೆ ಗೌರವಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಳಾಡಿ ಸುರೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ಈರಣ್ಣ ಕಡಾಡಿ , ಉಡುಪಿ ಚಿಕ್ಕಮಗಳೂರು ಸಂದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್,  ಕಾಪು ಶಾಸಕ  ಲಾಲಾಜಿ ಆರ್ ಮೆಂಡನ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಂಗಳೂರು ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!