ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಂದ ಮನವಿಗಳ ವಿಚಾರಣೆ

ಉಡುಪಿ, ಜ.12: ರಾಜ್ಯದಲ್ಲಿನ ವಿವಿಧ ಜಾತಿ/ಜನಾಂಗಗಳನ್ನು ಹಿಂದುಳಿದ ವರ್ಗಗಳ
ಪಟ್ಟಿಗೆ ಹೊಸದಾಗಿ ಸೇರಿಸಲು, ಪ್ರವರ್ಗ ಬದಲಾವಣೆಗೆ, ಪರ್ಯಾಯ ಪದ ಸೇರ್ಪಡೆಗೆ ಮತ್ತು ಕಾಗುಣಿತ ದೋಷ ತಿದ್ದುಪಡಿ ಹಾಗೂ ಇತರೆ ವಿಷಯಗಳಿಗೆ ಸಂಬoಧಿಸಿದoತೆ, ಆಯೋಗದಲ್ಲಿ ಸ್ವೀಕೃತಗೊಂಡಿರುವ ಮನವಿಗಳ, ಬಹಿರಂಗ ವಿಚಾರಣೆ ಕಾರ್ಯಕ್ರಮವು, ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ, ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ರಾಜ್ಯದಲ್ಲಿ ಸುಮಾರು 15 ಲಕ್ಷ ದಷ್ಟು ಕುಂಬಾರ ಸಮುದಾಯದವರಿದ್ದು, ಈ ಸಮುದಾಯವನ್ನು ಪ್ರವರ್ಗ-2ಎ ರಲ್ಲಿ ಸೇರಿಸಿದೆ. ರಾಜ್ಯದಲ್ಲಿನ ಕುಂಬಾರ ಸಮುದಾಯಕ್ಕೆ ಒಳ ಮೀಸಲಾತಿಯನ್ನು ಕಲ್ಪಿಸಬೇಕು ಹಾಗೂ ಕುಂಬಾರ ವೃತ್ತಿಯನ್ನು ಕೌಶಲ್ಯಾಭಿವೃದ್ದಿ ಯೋಜನೆಯಡಿ ಸೇರ್ಪಡೆಗೊಳಿಬೇಕು,ಕುಂಬಾರ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಮತ್ತು ತರಬೇತಿಗೆ ವ್ಯವಸ್ಥೆ ಕಲ್ಪಿಸಬೇಕು, ದೇವರಾಜು ಅರಸು ನಿಗಮದಲ್ಲಿರುವ ಕುಂಬಾರ
ಅಭಿವೃಧ್ದಿ ನಿಗಮವನ್ನು ಪ್ರತ್ಯೇಕಿಸಿ, ಕುಂಬಕಲಾ ಅಭಿವೃಧ್ದಿ ಮಂಡಳಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ, ಮಂಗಳೂರು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸುನೀಲ್ ಹಾಗೂ ಸಮುದಾಯದ ಮುಖಂಡರು ಕೋರಿದರು.

ಈ ಕುರಿತಂತೆ ಆಯೋಗಕ್ಕೆ ನೀಡಿರುವ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಮುಖಾರಿ/ಮುವಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪುತ್ತೂರು, ಸುಳ್ಯ, ಮಡಿಕೇರಿಯಲ್ಲಿ ವಾಸಮಾಡುತ್ತಿದ್ದು, ಇದುವರೆಗೆ ರಾಜ್ಯದಲ್ಲಿನ ಯಾವುದೇ ವರ್ಗಕ್ಕೆ ಸೇರ್ಪೆಡೆ ಮಾಡಿಲ್ಲ. ಇದರಿಂದ ರಾಜ್ಯದಲ್ಲಿ
ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ವಂಚಿತರಾಗಿದ್ದು, ಕೇರಳ ರಾಜ್ಯದಲ್ಲಿ ಈಗಾಗಲೇ ಓಬಿಸಿ ವರ್ಗದಲ್ಲಿ ಸೇರ್ಪಡೆ ಮಾಡಿದ್ದು, ರಾಜ್ಯದಲ್ಲಿಯೂ ಓಬಿಸಿ ವರ್ಗಕ್ಕೆ ಸೇರ್ಪಡೆ ಮಾಡುವಂತೆ, ಶಂಕರ ಮುಖಾರಿ ಪಟ್ರೇಡಿ ಮನೆ, ಅಧ್ಯಕ್ಷರು, ಮುಖಾರಿ ಸಮಾಜ ಸಂಘ, ಮತ್ತು ಬಾಲಕೃಷ್ಣ ಎ ಸಲಹೆಗಾರರು, ಮುಖಾರಿ/ಮುವಾರಿ ಸಮುದಾಯದ ಸಂಘ ಇವರು ಕೋರಿದರು.

ಕೇರಳ ರಾಜ್ಯದಲ್ಲಿ ಓಬಿಸಿ ಸೇರ್ಪಡೆ ಮಾಡಿರುವ ಕುರಿತ ಆದೇಶದ ಪ್ರತಿ ಮತ್ತಿತರ ದಾಖಲೆಗಳನ್ನು ನೀಡುವಂತೆ ತಿಳಿಸಿದ ಆಯೋಗದ ಅಧ್ಯಕ್ಷರು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೇರಳ ಮೂಲದ ನಾಯರ್ ಜಾತಿಯವರು ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಇದ್ದು, ಈ ಜಾತಿಯವರು ಕರ್ನಾಟಕದ ಒಕ್ಕಲಿಗ, ಬಂಟ್ಸ್ ಜಾತಿಗೆ ಸಾಮ್ಯತೆ ಹೊಂದಿದ್ದು, ಇವರನ್ನು ಇದುವರೆಗೂ ರಾಜ್ಯದ ಯಾವುದೇ
ವರ್ಗದಲ್ಲಿ ಗುರುತಿಸಿಲ್ಲ. ಆದ್ದರಿಂದ ಅವರನ್ನು ಹಿಂದುಳಿದ ಪಟ್ಟಿಗೆ ಸೇರ್ಪಡೆ ಮಾಡಿ, ಸೂಕ್ತ ಮೀಸಲಾತಿ ಸೌಲಭ್ಯ ಒದಗಿಸುವಂತೆ ಮತ್ತು ನಾಯರ್ ಹೆಸರನ್ನು ಆಂಗ್ಲ ಭಾಷೆಯಲ್ಲಿ ಬರೆಯುವಾಗ ಕಂಡುಬರುವ ಕಾಗುಣಿತ ದೋಷವನ್ನು
ಸರಿಪಡಿಸುವಂತೆ ಮುರುಳಿ ಹೆಚ್,ಅಧ್ಯಕ್ಷರು, ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ(ರಿ) ಮತ್ತು ಸಮುದಾಯದ ಮುಖಂಡರು ಕೋರಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.

ಬನ್ನರ್ ಜಾತಿಯನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡುವ ಕುರಿತಂತೆ ಸಲ್ಲಿಕೆಯಾದ ಮನವಿಗೆ ಸಂಬoದಿಸಿದoತೆ, ಪ.ವರ್ಗದ ಆಯೋಗಕ್ಕೆ ಈ ಮನವಿಯನ್ನು ಸಲ್ಲಿಸುವಂತೆ ಅಧ್ಯಕ್ಷರು ಸೂಚಿಸಿದರು. ಬಹಿರಂಗ ವಿಚಾರಣೆ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ, ಕಲ್ಯಾಣ್ ಕುಮಾರ್, ರಾಜಶೇಖರ್, ಕೆ.ಟಿ.ಸುವರ್ಣ, ಅರುಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!