ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಸಹಿ ಹಾಕಿದ್ದು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ.
“ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಅನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್ನಲ್ಲಿ ಬಹುಮತ ಇಲ್ಲದ ಕಾರಣ ಪರಿಷತ್ನಲ್ಲಿ ಮಂಡನೆಯಾಗಿರಲಿಲ್ಲ. ಹೀಗಾಗಿ ಈ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಅದಕ್ಕೆ ಇಂದು ರಾಜ್ಯಪಾಲರು ಸಹಿ ಹಾಕಿದ್ದಾರೆ.
ಸುಗ್ರೀವಾಜ್ಞೆಯ ಪ್ರಕಾರ ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ.
ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದರೆ ಆ ಜಾನುವಾರುಗಳನ್ನು ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ಸಹ ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ಸಹ ವಿಧಿಸಲಾಗುವುದು. ಆದರೆ, ಕೃಷಿ ಮತ್ತು ಪಶು ಸಂಗೋಪನೆಗೆ ಜಾನುವಾರು ಸಾಗಿಸಬಹುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ.